ದಾಂಡೇಲಿ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ, ಸಿಡಾಕ್- ಉದ್ಯಮಶೀಲತಾ ಮಾರ್ಗದರ್ಶನ ಕೇಂದ್ರ ಕಾರವಾರ ಹಾಗೂ ನಗರದ ಸಾಫ್ಟೆಕ್ ಕಂಪ್ಯೂಟರ‍್ಸ್ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಉದ್ಯಮಶೀಲತಾ ತಿಳುವಳಿಕೆ ಕಾರ್ಯಕ್ರಮವನ್ನು ನಗರದ ಕರ್ನಾಟಕ ಸಂಘದ ಪಂಚಗಾನಭವನದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕೈಗಾರಿಕಾ ಕೇಂದ್ರದ ನಿರ್ದೇಶಕ ಎಸ್.ವೆಂಕಟೇಶ, ಉದ್ಯಮ ಸ್ಥಾಪನೆಗೆ ಸರ್ಕಾರವು ನೀಡುವ ಸಹಾಯ ಮತ್ತು ಸವಲತ್ತುಗಳ ಬಗ್ಗೆ ವಿವರಿಸಿ ಅದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಸಿಡಾಕ್ ಸಂಸ್ಥೆಯ ಉಪ ನಿರ್ದೇಶಕ ಶಿವಾನಂದ ವಿ.ಯಲಿಗಾರ ಮಾತನಾಡಿ, ಉದ್ಯಮಶೀಲತೆಯ ಮಹತ್ವ ಹಾಗೂ ಉದ್ಯಮಶೀಲತೆಯ ಅಭಿವೃದ್ಧಿಯ ಬಗ್ಗೆ ತಿಳಿಸಿ ಭಾಗವಹಿಸಿದ ಅಭ್ಯರ್ಥಿಗಳು ಉದ್ಯಮಶೀಲರಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು.
ಸಿಡಾಕ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಜಗದೀಶ ಉದ್ಯಮ ಯೋಜನೆಗಳನ್ನು ಗುರುತಿಸುವುದು ಹಾಗೂ ಉದ್ಯಮ ಸ್ಥಾಪನೆಗೆ ಸಹಾಯ ನೀಡುತ್ತಿರುವ ಸಂಸ್ಥೆಗಳ ಬಗ್ಗೆ ತಿಳಿಸಿದರು. ಆಶಾಕಿರಣ ಐಟಿಐ ಕಾಲೇಜಿನ ಪ್ರಾಚಾರ್ಯ ಎನ್.ಆರ್.ನಾಯ್ಕ, ಇಂದಿನ ದಿನಗಳಲ್ಲಿ ಉದ್ಯೋಗ ಸಿಗುವುದು ಕಷ್ಟಕರವಾಗಿದ್ದು, ಯುವಕ/ಯುವತಿಯರು ಉದ್ಯಮ ಸ್ಥಾಪನೆಯತ್ತ ಮುಖಮಾಡಿ ಉದ್ಯಮಶೀಲರಾಗಲು ಕರೆ ನೀಡಿದರು.
ಸಾಪ್ಟೆಕ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸೈಯದ್ ಇಸ್ಮಾಯಿಲ್ ತಂಗಳ ಅವರು ಉದ್ಯೋಗಕ್ಕಾಗಿ ಅಲ್ಲಿಇಲ್ಲಿ ಎಂದು ಅಡ್ಡಾಡಿ ಒದ್ದಾಡಿ ಸಮಯಹರಣ ಮಾಡುವ ಬದಲು ಉದ್ಯಮಶೀಲರಾಗಿ ಸ್ವತಂತ್ರ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳುವುದು ಉತ್ತಮ ಎಂದರು. ವಿಟಿಯು ಕೌಶಲ್ಯಾಭಿವೃದ್ಧಿ ಕೇಂದ್ರದ ನಿರ್ದೇಶಕ ಮನೋಹರ ಕನಕತ್ರಿಯವರು ವಿಟಿಯು ಸಂಸ್ಥೆಯಲ್ಲಿ ಇರುವ ತರಬೇತಿಗಳನ್ನು ವಿವರಿಸಿ, ಈ ತರಬೇತಿಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.
ತರಬೇತುದಾರ ಶಿವರಾಜ ಹೆಳವಿ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಸಾಫ್ಟೆಕ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮೀನಾಜ್ ಶೇಖ್ ಅವರು ವಂದಿಸಿದರು.