
ಜೋಯಿಡಾ: ಪ್ರೆಸ್ ಕ್ಲಬ್ ಜೊಯಿಡಾ ಮತ್ತು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಪ್ರತಿ ವರ್ಷ ವನ ಮಹೋತ್ಸವ ಮಾಡುವ ಮೂಲಕ ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಕೂಡಾ ನಮಗೆ ಅವಶ್ಯ ಎಂದು ಹಳಿಯಾಳ ವಿಭಾಗದ ಡಿಸಿಎಪ್ ಡಾ. ಅಜ್ಜಯ್ಯ ಜಿ ಆರ್ ಹೇಳಿದರು.
ಅವರು ಬುಧವಾರ ಜೊಯಿಡಾ ಪ್ರೆಸ್ ಕ್ಲಬ್ (ರಿ) ವತಿಯಿಂದ ಜಗಲಬೇಟ ವಲಯ ಅರಣ್ಯಾಧಿಕಾರಿ ಕಚೇರಿ ಆವರಣದಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಗಲಬೇಟ ಆರ್.ಎಫ್.ಓ ಅಶೋಕ ಶಿಳನ್ನವರ ಮಾತನಾಡಿ ಪತ್ರಕರ್ತರು ಕೋವಿಡ್ ಸಂದರ್ಭದಲ್ಲಿ ವಾರಿಯರ್ಸ್‍ಗಳಂತೆ ದುಡಿದು, ಸಮುದಾಯದಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಕೋವಿಡ್ ನಿಂದ ಕುಟುಂಬ ಮುಖ್ಯಸ್ಥನನ್ನು ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿರುವ ಕೆಲ ಕುಟುಂಬಗಳಿಗೆ ಸುಮಾರು ಆರು ತಿಂಗಳಿಗೆ ಆಗುವಂತೆ ದಿನಸಿ ಸಾಮಾನುಗಳನ್ನು ವಿತರಿಸುತ್ತಿರುವ ಜೊಯಿಡಾ ಪ್ರೆಸ್ ಕ್ಲಬ್ ಕಾರ್ಯ ಶ್ಲಾಘನೀಯ ಎಂದರು.
ನಂತರ ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಕಾಡು ಹಣ್ಣಿನ ಗಿಡಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಗಣೇಶಗುಡಿ ಎಸಿಎಪ್ ನಂಜುಂಡಪ್ಪ ಎಚ್.ಬಿ, ಗ್ರಾ.ಪಂ ಉಪಾಧ್ಯಕ್ಷೆ ಶಾಣ್ವಿ ಕಾಲ್ಮಣಕರ, ಸದಸ್ಯರಾದ ನೀತಾ ಕುಂಬಾರ, ಲಿಂಗಪ್ಪ ಕುಂಬಾರ ಜೊಯಿಡಾ ಪ್ರೆಸ್ ಕ್ಲಬ್ ಅಧ್ಯಕ್ಷ ಗಿರೀಶ ಭಾಗ್ವತ, ಡಿಆರ್‍ಎಫ್‍ಓ ಸುನಿಲ ಜಗದಾಳ, ಶಂಕರ ಕುಂಬಾರ ಮುಂತಾದವರು ಉಪಸ್ಥಿತರಿದ್ದರು. ಜೊಯಿಡಾ ಪ್ರೆಸ್ ಸದಸ್ಯ ಜ್ಞಾನೇಶ್ವರ ದೇಸಾಯಿ ಸ್ವಾಗತಿಸಿದರು. ಕಾರ್ಯದರ್ಶಿ ಗಿರೀಶ ಪಾಟೀಲ ವಂದಿಸಿದರು.