ಶಿರಸಿ: ಜಿಲ್ಲೆಯ ಸಾಂಬಾರು ಬೆಳೆಗಳ ಗುಣಮಟ್ಟ ಉತ್ಕೃಷ್ಟದ್ದಾಗಿದ್ದು, ಸಾವಯವ ಕೃಷಿಗೆ ಜಿಲ್ಲೆಯ ರೈತರು ಹೆಚ್ಚಿನ ಒತ್ತು ನೀಡುತ್ತಾ ಬಂದಿರುವುದು ಸಂತಸದ ಸಂಗತಿ ಎಂದು ರಾಜ್ಯ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ತೋಟಗಾರಿಕಾ ಇಲಾಖೆ, ಶಿರಸಿ,ಕರ್ನಾಟಕ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ, ಹುಬ್ಬಳ್ಳಿ,ತೋಟಗಾರಿಕಾ ಮಹಾವಿದ್ಯಾಲಯ, ಶಿರಸಿ, CLAPS ರೈತ ಉತ್ಪಾದಕ ಕಂಪನಿ, ಯಡಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಶಿರಸಿಯ ಟಿ.ಆರ್.ಸಿ. ಸಭಾಭವನದಲ್ಲಿ ನಡೆದ ‘ಸಾಂಬಾರು ಬೆಳೆಗಳ ಬೇಸಾಯ ತಂತ್ರಜ್ಞಾನ, ಸಂಸ್ಕರಣೆ ಹಾಗೂ ಮಾರುಕಟ್ಟೆ’ ಕುರಿತು ‘ವಿಚಾರ ಸಂಕಿರಣ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹವಾಮಾನ ವೈಪರೀತ್ಯ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಮಧ್ಯದಲ್ಲಿಯೂ ಸಹ ಆಶಾಭಾವದಿಂದ ಕಾರ್ಯ ನಿರ್ವಹಿಸುವ ರೈತರ ತಾಳ್ಮೆಯನ್ನು ನಾವು ಗೌರವಿಸಬೇಕು. ಇಲಾಖೆಗಳೂ ಸಹ ಉತ್ತಮ ಗುಣಮಟ್ಟದ ಬೀಜವನ್ನು ರೈತರಿಗೆ ನೀಡಬೇಕು ಎಂದರು.
ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಕೆಯತ್ತ ರೈತರು ಹೆಚ್ಚು ಗಮನ ಹರಿಸುತ್ತಿರುವುದು ಸಂತಸದ ಸಂಗತಿ. ಆಧುನಿಕ ತಂತ್ರಜ್ಞಾದ ಬಳಕೆಯ ಕುರಿತಾಗಿ ಆಸಕ್ತಿ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ರೈತರು ಇಚ್ಛಾಶಕ್ತಿ ತೋರಿಸಲಿ. ಜಿಲ್ಲೆಯ ಸಹಕಾರಿ ಸಂಸ್ಥೆಗಳೂ ಸಹ ವ್ಯಾಪಾರಿ ಮನೋಭಾವವನ್ನು ತುಸು ಬದಿಗಿಟ್ಟು ಸ್ಥಳೀಯ ಉತ್ಪನ್ನಗಳ ಸಂಸ್ಕರಣೆ ಮಾಡುವ, ರೈತರಿಗೆ ಅನುಕೂಲವಾಗುವ ತಂತ್ರಜ್ಞಾನವನ್ನು ತಯಾರಿಸುವ ಇಚ್ಛಾಶಕ್ತಿ ತೋರಿಸಬೇಕು. ಸರಕಾರದ ಜೊತೆಜೊತೆಗೆ ಸಹಕಾರಿ ಸಂಘಗಳೂ ಸಹ ರೈತರ ಹಿತ ಕಾಪಾಡಲು ಸಹಕರಿಸಲು ಕರೆ ನೀಡಿದರು.
ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಸತೀಶ ಹೆಗಡೆ ಪ್ರಸ್ತಾವಿಕ ಮಾತನಾಡಿ, ಸಹ್ಯಾದ್ರಿ ಘಟ್ಟ ಪ್ರದೇಶ ಸಾಂಬಾರು ಬೆಳೆಗಳಿಗೆ ಹೆಸರುವಾಸಿಯಾಗಿದೆ. ರೋಗ, ಕೀಟದ ಕಾರಣಕ್ಕೆ ಸಾಂಬಾರು ಬೆಳೆ ಕುಂಠಿತಕ್ಕೆ ಕಾರಣವಾಗಿದೆ. ರೈತರಿಗೆ ಅನುಕೂಲವಾಗುವ ನಿಟ್ಡಿನಲ್ಲಿ ತೋಟಗಾರಿಕಾ ಕ್ಯಾಲೆಂಡರ್ ಮಾಡಿ, ಮಳೆ ನಕ್ಷತ್ರ ಮಾಹಿತಿ, ಯೋಜನಾವಾರು ಇಲಾಖೆಯ ಮಾಹಿತಿ, ಕೃಷಿ ಪೂರಕ ಮಾಹಿತಿ ಇರುವ ಕ್ಯಾಲೆಂಡರ್ ಸಿದ್ಧಪಡಿಸಲಾಗಿದೆ. ಇಲಾಖೆಯಿಂದ ದೊರೆಯುವ ಎಲ್ಲ ಯೋಜನೆ ಪ್ರಯೋಜನ ರೈತರು ಪಡೆದುಕೊಳ್ಳುವಂತೆ ಹೇಳಿದರು.
ಕ್ಲಾಪ್ಸ್ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಜಿ.ಆರ್. ಹೆಗಡೆ ಬೆಳ್ಳೆಕೇರಿ ಮಾತನಾಡಿ, ಸರಕಾರದ ಯೋಜನೆಯನ್ನು ರೈತರು ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳಲು ವಿನಂತಿಸಿದರು. ಎ.ಪಿ.ಎಂ.ಸಿ ಅಧ್ಯಕ್ಷ ಪ್ರಶಾಂತ ಗೌಡರ್ ಮಾತನಾಡಿ, ಶುಂಠಿಯ ಬೆಲೆಯಲ್ಲಿ ಸ್ಥಿರತೆ ಇಲ್ಲದಿರುವುದು ಆತಂಕಕಾರಿ ಸಂಗತಿ. ಶುಂಠಿಯ ಬೆಳೆ ಸ್ಥಿರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಇಲಾಖೆ, ಸರಕಾರ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ತೋಟಗಾರಿಕಾ ಇಲಾಖಾ ಅಡಿಯಲ್ಲಿ ನೋಂದಣಿಯಾದ ತೋಟಗಾರ್ಸ್ ಗ್ರೀನ್ ಗ್ರೂಪ್ ಹಾಗು ಕ್ಲಾಪ್ಸ್ ರೈತ ಉತ್ಪಾದಕ ಸಂಸ್ಥೆಗಳಿಗೆ ಸರಕಾರದಿಂದ ಬಿಡುಗಡೆಯಾದ ನಿರ್ವಹಣಾ ವೆಚ್ಚವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತಜ್ಞರಿಂದ ‘ಸಾಂಬಾರು ಬೆಳೆಗಳ ವೈಜ್ಞಾನಿಕ ಬೇಸಾಯ ಕ್ರಮಗಳು’, ‘ಸಾಂಬಾರು ಬೆಳೆಗಳ ರೋಗ ನಿರ್ವಹಣೆ’,’ಸಾಂಬಾರು ಬೆಳೆಗಳಲ್ಲಿ ಕೀಟ ನಿಯಂತ್ರಣ’,’ಸಾವಯವ ತೋಟಗಾರಿಕೆ ಮತ್ತು ಕಾಂಪೋಸ್ಟ್ ತಯಾರಿಕೆ’,’ಸಾಂಬಾರು ಬೆಳೆಗಳ ಸಂಸ್ಕರಣೆ ಯೋಜನೆಗಳು’, ‘ಸಾಂಬಾರು ಬೆಳೆಗಳ ಮಾರುಕಟ್ಟೆ’ ವಿಷಯಗಳ ಮೇಲೆ ಉಪನ್ಯಾಸ ನಡೆಯಿತು.
ಮುಖ್ಯ ಅತಿಥಿಗಳಾಗಿ ತೋಟಗಾರಿಕೆ ಉಪನಿರ್ದೇಶಕ ಡಾ. ಬಿ. ಪಿ. ಸತೀಶ್, ಡೀನ್ ಆಫ್ ತೋಟಗಾರಿಕಾ ಮಹಾವಿದ್ಯಾಲಯ,ಡಾ. ಎಮ್. ಎಚ್. ತಟಗಾರ, ಪ್ರಗತಿಪರ ಕೃಷಿಕ ಆರ್. ಎಂ. ಹೆಗಡೆ, ಸಾಲ್ಕಣಿ ಉಪಸ್ಥಿತರಿದ್ದರು.
ಇದೇ ವೇಳೆ ಪರಿಶಿಷ್ಟ ಪಂಗಡದ ಕೃಷಿಕರಿಗೆ ಸರಕಾರದಿಂದ ಬಿಡುಗಡೆಯಾಗಿರುವ ತರಕಾರಿ ಬೀಜದ ಕಿಟ್ ಸಾಂಕೇತಿಕವಾಗಿ ವಿತರಿಸಲಾಯಿತು.
ತೋಟಗಾರಿಕಾ ಇಲಾಖೆಯ ಶಿವಾನಂದ ವಂದಿಸಿದರು. ತೋಟಗಾರಿಕಾ ಇಲಾಖೆಯ ಗಣೇಶ ಹೆಗಡೆ ಸ್ವಾಗತಿಸಿ, ನಿರೂಪಿಸಿದರು. ಮಾಹಿತಿ ಕಾರ್ಯಾಗಾರಕ್ಕೆ ಆಗಮಿಸಿದ ಕೃಷಿಕರಿಗೆ ದಾಲ್ಚಿನಿ ಮತ್ತು ಲವಂಗದ ಸಸಿ ನೀಡಲಾಯಿತು.