ದಾಂಡೇಲಿ: ನಗರದ ಸಹೋದರಿಯರಾದ ಸಾಕ್ಷಿ ಸಾಮಂತ ಮತ್ತು ಶ್ರದ್ಧಾ ಸಾಮಂತಗೆ ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ನುಡಿ ತೇರು ರಾಜ್ಯ ಮಟ್ಟದ ಮಕ್ಕಳ ಸಮ್ಮೇಳನದಲ್ಲಿ ‘ಬಾಲ ಸಾಹಿತ್ಯ ಪ್ರಭೆ’ ಬಿರುದು ನೀಡಿ ಸನ್ಮಾನಿಸಿ, ಗೌರವಿಸಲಾಗಿದೆ.
ಸಾಕ್ಷಿ ಮತ್ತು ಶ್ರದ್ಧಾ ಸಹೋದರಿಯರಿಬ್ಬರು ತಾವು ಕಿರು ವಯಸ್ಸಿನಲ್ಲಿಯೇ ರಚಿಸಿದ ಕವನ ಸಂಕಲನವನ್ನು ಇತ್ತೀಚೆಗೆ ಬಿಡುಗಡೆ ಮಾಡಿದ್ದರು. ಅದನ್ನು ಪರಿಗಣಿಸಿರುವ ಭಕ್ತಿ ಕಾವ್ಯ ಯಾನ ಬೆಂಗಳೂರು ಹಾಗೂ ವಿದ್ಯಾಧರ ಕನ್ನಡ ಪ್ರತಿಷ್ಠಾನ ಧಾರವಾಡದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಮಕ್ಕಳ ಸಮ್ಮೇಳನದಲ್ಲಿ ‘ಬಾಲ ಸಾಹಿತ್ಯ ಪ್ರಭೆ’ ಎನ್ನುವ ಬಿರುದು ನೀಡಿ ಸನ್ಮಾನಿಸಲಾಗಿದೆ. ಪ್ರಶಸ್ತಿ ಭಾಜನರಾದ ಬಾಲಪ್ರತಿಭೆಗಳಿಬ್ಬರನ್ನು ನಗರದ ಗಣ್ಯರನೇಕರು ಅಭಿನಂದಿಸಿದ್ದಾರೆ.