ಕಾರವಾರ: ಕಾರವಾರದಲ್ಲಿ ಸ್ಕೇಟಿಂಗ್ ರಿಂಕ್ ನಿರ್ಮಾಣ ಅತ್ಯಗತ್ಯವಾಗಿದೆ. ಆದರೆ ಇದನ್ನು ಈ ಉದ್ದೇಶಿತ ಕಡಲತೀರದಲ್ಲಿ ನಿರ್ಮಿಸಲು ಮುಂದಾದರೆ ಸಿಆರ್‌ಝೆಡ್ ಕಾರಣಕ್ಕಾಗಿ ಈ ಯೋಜನೆ ಅನುಷ್ಠಾನಕ್ಕೆ ಬರುವುದಕ್ಕೆ ಅಡ್ಡಿಯಾಗುವ ಎಲ್ಲ ಸಾಧ್ಯತೆಗಳಿದೆ. ಸ್ಕೇಟಿಂಗ್ ರಿಂಕ್ ಅನ್ನು ಉದ್ದೇಶಿತ ಕಡಲತೀರದ ಬದಲು ಮಾಲಾದೇವಿ ಮೈದಾನದ ಅಂಚಿನಲ್ಲಿ ನಿರ್ಮಿಸಬೇಕು ಎಂದು ಮಾಜಿ ಶಾಸಕ ಸತೀಶ ಸೈಲ್ ಆಗ್ರಹಿಸಿದ್ದಾರೆ.
ಮಾಲಾದೇವಿ ಮೈದಾನದಲ್ಲಿ ಸದ್ಯಕ್ಕೆ ವಾಣಿಜ್ಯ ಸಂಕೀರ್ಣ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ವಾಣಿಜ್ಯ ಸಂಕೀರ್ಣಗಳ ಅವಶ್ಯಕತೆ ಮಾಲಾದೇವಿ ಮೈದಾನಕ್ಕೆ ಇಲ್ಲ. ಇದು ಕ್ರೀಡಾ ಉದ್ದೇಶಕ್ಕೆ ವಿರುದ್ಧವಾಗಿದೆ. ಇದರ ಬದಲಾಗಿ ಈಗ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿರುವ ಸ್ಥಳದಲ್ಲಿ ಸ್ಕೇಟಿಂಗ್ ರಿಂಕ್‌ನ ಒಳಾಂಗಣ ಕ್ರೀಡಾಂಗಣ ನಿರ್ಮಿಸಬೇಕು ಎಂದು ಹೇಳಿದ್ದಾರೆ.
ಸ್ಕೇಟಿಂಗ್ ಒಳಾಂಗಣ ಕ್ರೀಡಾಂಗಣ ನಿರ್ಮಿಸಿದರೆ ಅದಕ್ಕೆ ಹೊಂದಿಕೊಂಡಂತೆ ವಿವಿಧ ಕ್ರೀಡಾಕೂಟಗಳನ್ನು ಜನರು ಕುಳಿತು ವೀಕ್ಷಿಸಲು ಮೈದಾನದ ಪೂರ್ವ ಹಾಗೂ ಪಶ್ಚಿಮ ಭಾಗದಲ್ಲಿ ಗ್ಯಾಲರಿ ನಿರ್ಮಾಣ ಮಾಡಬಹುದು. ಗ್ಯಾಲರಿ ಅಡಿಯಲ್ಲಿ ಮಹಿಳಾ ಹಾಗೂ ಪುರುಷ ಕ್ರೀಡಾಪಟುಗಳ ಚೇಂಜಿಂಗ್ ರೂಂ, ಶೌಚಾಲಯ ನಿರ್ಮಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಂದ ವೇಳೆ ಮಾಲಾದೇವಿ ಮೈದಾನದ ಬಳಿ ಸ್ಕೇಟಿಂಗ್ ರಿಂಕ್ ನಿರ್ಮಾಣ ಸಾಧ್ಯವಾಗದೇ ಇದ್ದರೆ ಈ ಹಿಂದೆ ಬಿಲ್ಟ್ ಸರ್ಕಲ್ ಬಳಿ ಮಿತ್ರ ಸಮಾಜದ ಹಿಂಭಾಗದಲ್ಲಿ ಕಡಲತೀರದಲ್ಲಿ ಮೂರು ಉಗ್ರಾಣಗಳಿದ್ದವು. ಈ ಉಗ್ರಾಣದ ಬಳಿ ಈ ಹಿಂದೆ ಅಯ್ಯಪ್ಪ ಸ್ವಾಮಿ ಪೂಜೆ, ಅನುಷ್ಠಾನ ನಡೆಯುತ್ತಿತ್ತು. ಈ ಉಗ್ರಾಣದ ಕಟ್ಟಡಕ್ಕೆ ಸಿಆರ್‌ಝೆಡ್ ಅನುಮತಿ ಇತ್ತು. ಈ ಉಗ್ರಾಣ 1992ರ ಪೂರ್ವದಲ್ಲಿ ಇದ್ದ ಕಟ್ಟಡ ಆಗಿತ್ತು. ಈ ಕಟ್ಟಡ ತೆರವು ಆಗಿರುವುದರಿಂದ ಮತ್ತೆ ಸಿಆರ್‌ಝೆಡ್ ಅನುಮತಿ ಅಗತ್ಯವಿಲ್ಲ. ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ಉಜ್ವಲಕುಮಾರ ಘೋಷ ಅವರು ಈ ಉಗ್ರಾಣ ತೆರವುಗೊಳಿಸಿದ್ದರು. ಇಲ್ಲಿ ಸಿಆರ್‌ಝೆಡ್ ಅನುಮತಿ ಸುಲಭವಾಗಿ ದೊರಕಲಿದೆ ಎಂದಿರುವ ಅವರು, ಒಳಾಂಗಣ ಸ್ಕೇಟಿಂಗ್ ರಿಂಕ್ ನಿರ್ಮಾಣಗೊಂಡರೆ ಬೇಸಿಗೆ, ಮಳೆಗಾಲದಲ್ಲೂ ಮಕ್ಕಳು ಆಟ ಆಡಲು, ತರಬೇತಿ ಪಡೆಯಲು ಅನುಕೂಲವಾಗಲಿದೆ ಎಂದಿದ್ದಾರೆ.