ಸಿದ್ದಾಪುರ: ರಾಜ್ಯಮಟ್ಟದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಹಿರಿಯ ಸಹಕಾರಿ ಧುರೀಣ ಆರ್.ಎಂ.ಹೆಗಡೆ ಬಾಳೇಸರ ಮತ್ತು ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿರುವ ರಾಘವೇಂದ್ರ ಶಾಸ್ತ್ರಿ ಬಿಳಗಿ ಅವರನ್ನು ಕಂಚಿಕೈ ಸೇವಾ ಸಹಕಾರಿ ಸಂಘದಿಂದ ಗೌರವಿಸಿ ಸನ್ಮಾನಿಸಲಾಯಿತು.
ಸನ್ಮಾನಿತರಾದ ಆರ್.ಎಂ ಹೆಗಡೆ ಮಾತನಾಡಿ, ಹಲವಾರು ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಸೇವಾ ಭಾವನೆಯಿಂದ ಕಾರ್ಯ ಮಾಡುತ್ತ ಬಂದಿದ್ದೇನೆ. ಈಗ ರಾಜ್ಯಮಟ್ಟದ ಸಹಕಾರ ಪ್ರಶಸ್ತಿ ಎಲ್ಲರ ಸಹಕಾರದಿಂದ ಬಂದಿದೆ ಎಂದರು.
ಇನ್ನೋರ್ವ ಸನ್ಮಾನಿತ ರಾಘವೇಂದ್ರ ಶಾಸ್ತ್ರಿ ಮಾತನಾಡಿ, ಸಿದ್ದಾಪುರ ತಾಲೂಕಿನ ವಿವಿಧ ಸಹಕಾರ ಸಂಘ-ಸಂಸ್ಥೆಗಳ ಬೆಂಬಲದಿಂದ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ ನಿರ್ದೇಶಕನಾಗಿ ಆಯ್ಕೆಯಾಗಿದ್ದೇನೆ. ಈ ಭಾಗದ ಸಹಕಾರ ಸಂಘಗಳ ಬೇಡಿಕೆಗಳಿಗೆ ಸ್ಪಂದಿಸುತ್ತ ಸಹಕಾರ ಕ್ಷೇತ್ರದ ಗೌರವ ಹೆಚ್ಚಿಸುವ ದಿಸೆಯಲ್ಲಿ ಕಾರ್ಯ ಮಾಡುತ್ತೇನೆ ಎಂದರು.
ಕಂಚಿಕೈ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜು ಹೆಗಡೆ ಹಾಗೂ ನಿರ್ದೇಶಕರು, ಕಾರ್ಯದರ್ಶಿ ರಮೇಶ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಮೋಹನ ಮಡಿವಾಳ ಸ್ವಾಗತಿಸಿ ನಿರೂಪಿಸಿದರು. ನಿರ್ದೇಶಕ ಜಿ.ಎಂ.ಭಟ್ಟ ವಂದಿಸಿದರು.