ಹಳಿಯಾಳ: ವಿಆರ್‌ಡಿಎಮ್ ಟ್ರಸ್ಟ್ ನ ವಿಮಲ ವಿ.ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯಲ್ಲಿ 9 ಮತ್ತು 10ನೇ ತರಗತಿಯ ವಿದ್ಯಾರ್ಥಿ ಮತ್ತು ಅವರ ಪಾಲಕರಿಗಾಗಿ ಶೈಕ್ಷಣಿಕ ವೃತ್ತಿ ಸಮಾಲೋಚನೆ ಹಾಗೂ ಮಕ್ಕಳ ಉತ್ತಮ ಪಾಲನೆಯಲ್ಲಿ ಪಾಲಕರ ಪಾತ್ರ ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರ ನಡೆಯಿತು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಟ್ರಸ್ಟ್ ಸದಸ್ಯ ಶಾಮ ಕಾಮತ್ ಭಾಗವಹಿಸಿ, ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದರು. ಉತ್ತಮ ಅಡಿಪಾಯವಿದ್ದರೆ ಉತ್ತಮ ಕಟ್ಟಡ ನಿರ್ಮಾಣ ಸಾಧ್ಯ ಅಂತೆಯೇ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಇಂದಿನ ನಿರ್ಧಾರಗಳು ಹಾಗೂ ವೃತ್ತಿಯ ಆಯ್ಕೆಯಲ್ಲಿ ಸ್ಪಷ್ಟ ನಿರ್ಧಾರಗಳ ಕುರಿತು ತಿಳಿಸಿದರು.
ಪಾಲಕರು ತಮ್ಮ ತಮ್ಮ ಮಕ್ಕಳ ಅಭಿರುಚಿ, ಆಸಕ್ತಿಗನುಸಾರವಾಗಿ ಪ್ರಶ್ನೆಗಳನ್ನು ಕೇಳುತ್ತಾ ಸಮಂಜಸ ಉತ್ತರ ಪಡೆದರು. ಶಾಲೆಯ 80 ವಿದ್ಯಾರ್ಥಿಗಳು ಹಾಗೂ ಸುಮಾರು 25ಕ್ಕೂ ಹೆಚ್ಚು ಪಾಲಕರು ಈ ಕಾರ್ಯಾಗಾರದಲ್ಲಿ ಭಾಗಿಯಾಗಿ, ಕಾರ್ಯಾಗಾರದ ಸದುಪಯೋಗ ಪಡೆದುಕೊಂಡರು. ಪ್ರಾಂಶುಪಾಲರಾದ ಡಾ.ಸಿ.ಬಿ.ಪಾಟೀಲ ಹಾಗೂ ಎಲ್ಲ ಶಿಕ್ಷಕರು ಕಾರ್ಯಾಗರದಲ್ಲಿ ಭಾಗಿಯಾಗಿದ್ದರು. ಪ್ರೀತಮ್ ಚವ್ಹಾಣ, ಮೊನಾಲಿಸಾ ಮೆನನ್‌ಜಸ್ ಕಾರ್ಯಕ್ರಮದ ನಿರೂಪಣೆ, ಸ್ವಾಗತ ಮತ್ತು ವಂದನಾರ್ಪಣೆಯನ್ನು ನೆರವೇರಿಸಿದರು.