ಕುಮಟಾ: ತಾಲೂಕಿನ ಕಡಲತೀರದಲ್ಲಿರುವ ಅಪಾಯಕಾರಿ ಸ್ಥಳಗಳಲ್ಲಿ ಸೂಚನಾ ಫಲಕ ಅಳವಡಿಸುವ ಜೊತೆಗೆ ಕೆಲವೆಡೆ ನಿಷೇಧ ವಲಯವೆಂದು ಗುರುತಿಸುವಂತೆ ರೆಸಾರ್ಟ್, ಹೋಟೆಲ್, ಹೋಮ್ ಸ್ಟೇಗಳ ಮಾಲಿಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಸೂಚಿಸಿದರು.
ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿ ಸಭೆಯ ಮಾಹಿತಿ ನೀಡಿದರು. ಮಳೆಗಾಲದಲ್ಲಿ ಪ್ರವಾಸಕ್ಕೆಂದು ಆಗಮಿಸಿ, ಸಮುದ್ರದ ನೀರಿಗೆ ಇಳಿದು ಅಲೆಯ ರಭಸಕ್ಕೆ ಕೊಚ್ಚಿ ಹೋಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮಳೆಗಾಲದಲ್ಲಿ ಸಮುದ್ರ ಒರಟಾಗಿರುತ್ತದೆ. ಈ ಕಾರಣಕ್ಕೆ ನೀರಿಗೆ ಇಳಿಯದಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯಿಂದ ಆದೇಶವಿದ್ದರೂ, ಕೆಲ ಪ್ರವಾಸಿಗರು ನೀರಿಗೆ ಇಳಿಯುವುದು ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ರೆಸಾರ್ಟ್, ಹೊಟೆಲ್ ಮತ್ತು ಹೋಂ ಸ್ಟೇ ಮಾಲೀಕರ ಸಭೆ ನಡೆಸಿ, ಮುಂಜಾಗ್ರತ ಕ್ರಮ ಕೈಗೊಳ್ಳಲು ಅಗತ್ಯ ಸಲಹೆ-ಸೂಚನೆ ನೀಡಲಾಗಿದೆ ಎಂದರು.
ರೆಸಾರ್ಟ್ ಮಾಲೀಕರು ಲೈಫ್ ಸೇಫ್ ಗಾರ್ಡ್ ಸಿಬ್ಬಂದಿ ನೇಮಿಸಿಕೊಳ್ಳಬೇಕು. ಅಪಾಯ ಸ್ಥಳಗಳಲ್ಲಿ ನಾಮಫಲಕಗಳನ್ನು ಅಳವಡಿಸಬೇಕು. ಮೆಗಾ ಪೋನ್‌ಗಳ ಮೂಲಕ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಬೇಕು. ಲೈಫ್ ಜಾಕೆಟ್‌ಗಳನ್ನು ನೀಡಬೇಕು. ಕೆಂಪು ಬಣ್ಣದ ಧ್ವಜ ಹಾಕುವುದು ಸೇರಿದಂತೆ ಮತ್ತಿತರರ ಸೂಚನೆ ನೀಡಲಾಗಿದೆ. 3 ದಿನಗಳಲ್ಲಿ ಈ ಎಲ್ಲ ನಿಮಯಗಳನ್ನು ಪಾಲಿಸುತ್ತೇವೆ ಎಂದು ತಿಳಿಸಿದ್ದಾರೆ. ಕಂದಾಯ ಮತ್ತು ಪೊಲೀಸ್ ಇಲಾಖೆ ವತಿಯಿಂದ ಪರಿಶೀಲನೆ ನಡೆಸಲಾಗುತ್ತದೆ. ಸಾರ್ವಜನಿಕ ಬೀಚ್‌ಗಳಲ್ಲಿ ಜಿಲ್ಲಾಡಳಿತ ಮತ್ತು ಪ್ರವಾಸೋಧ್ಯಮ ಇಲಾಖೆಯಿಂದ ಲೈಫ್ ಸೇಫ್ ಗಾರ್ಡ್ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಮಳೆಗಾಲದ ಸಮಯದಲ್ಲಿ ಪ್ರವಾಸಿಗರು ನೀರಿಗೆ ಇಳಿಯದಂತೆ ಅಗತ್ಯ ಕ್ರಮ ವಹಿಸಲು ಸೂಚನೆ ನೀಡಲಾಗಿದೆ. ಮುರ್ಡೇಶ್ವರ, ಗೋಕರ್ಣದ ಓಂ ಬೀಚ್ ಮತ್ತು ಕುಡ್ಲೆ ಬೀಚ್‌ಗಳಲ್ಲಿ ಲೈಫ್‌ಸೇಫ್ ಗಾರ್ಡ್ ಸಿಬ್ಬಂದಿಗಳಿದ್ದು, ಅವರು ಪ್ರವಾಸಿಗರು ನೀರಿಗೆ ಇಳಿಯದಂತೆ ಕ್ರಮ ವಹಿಸುತ್ತಿದ್ದಾರೆ ಎಂದರು.
ಉಪವಿಭಾಗಾಧಿಕಾರಿ ರಾಹುಲ್ ಪಾಂಡೆ ಮಾತನಾಡಿ, ಕಡಲತೀರಗಳಲ್ಲಿರುವ ರೆಸಾರ್ಟ್ ಗಳಿಗೆ ಒಂದು ವರ್ಷ ಮಾತ್ರ ಲೈಸನ್ಸ್ ನೀಡಲಾಗುತ್ತದೆ. ಪ್ರತಿ ವರ್ಷ ನವೀಕರಣ ಮಾಡಿಕೊಳ್ಳಬೇಕು. ಮಳೆಗಾಲದ 3 ತಿಂಗಳು ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಕ್ರಮ ವಹಿಸಲು ಸೂಚನೆ ನೀಡಲಾಗುತ್ತದೆ. ಲೈಫ್ ಜಾಕೆಟ್ ನೀಡುವುದು ಸೇರಿದಂತೆ ಅಗತ್ಯ ಸೂಚನೆ ನೀಡುವ ಬಗ್ಗೆ ಜಿಲ್ಲಾಡಳಿತ ಜತೆ ಚರ್ಚಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ವಿವೇಕ ಶೇಣ್ವಿ, ಪಿಐ ತಿಮ್ಮಪ್ಪ ನಾಯಕ, ಕುಮಟಾ ಪಿಎಸ್‌ಐ ನವೀನ ನಾಯ್ಕ, ಗೋಕರ್ಣ ಪಿಎಸ್‌ಐ ರವೀಂದ್ರ ಬೀರಾದರ ಇದ್ದರು.