ಶಿರಸಿ: ನಮ್ಮ ಸಂಸ್ಕೃತಿ ಉಳಿಸಿಕೊಳ್ಳಲು ಗೃಹಸ್ಥಾಶ್ರಮದ ಪಾತ್ರ ಅತ್ಯಂತ ಮಹತ್ವದ್ದು ಎಂದು ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ನುಡಿದರು.
ಅವರು ಬೆಂಗಳೂರಿನ ಅಭ್ಯುದಯದಲ್ಲಿ ಸ್ವರ್ಣವಲ್ಲೀ ಮಹಾ ಸಂಸ್ಥಾನ, ಶ್ರೀಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ ಹಾಗೂ ಶ್ರೀ ಸ್ವರ್ಣವಲ್ಲಿ ಸೀಮಾ ಪರಿಷತ್ ಸಂಯೋಜನೆಯಲ್ಲಿ ನಡೆದ ಧನ್ಯೋ ಗ್ರಹಸ್ಥಾಶ್ರಮ ದಂಪತಿ ಶಿಬಿರದಲ್ಲಿ ಸಾನ್ನಿಧ್ಯ ನೀಡಿ ಆಶೀರ್ವಚನ ನುಡಿದರು.
ನಮ್ಮ ಪರಂಪರೆ ಉಳಿಯಬೇಕು ಎಂದರೆ ದಂಪತಿಗಳ ಮೇಲೆ ಆಧರಿಸಿದೆ. ಸರಿಯಾದ ವಯಸ್ಸಿಗೆ ವಿವಾಹ ಆಗಬೇಕು ಎಂದೂ ಹೇಳಿದರು.
ಹಿರಿಯ ವಿದ್ವಾಂಸ ಉಮಾಕಾಂತ ಭಟ್ಟ ಕೆರೇಕೈ ಮಾತನಾಡಿ, ಸಮಾಜದ ನಿರೀಕ್ಷೆ ಇರುವುದು ನವ ದಂಪತಿಗಳ ಮೇಲೆ. ಕಳೆದು ಹೋಗುತ್ತಿರುವ ಕೌಟುಂಬಿಕ ಸೌಭಾಗ್ಯ ಉಳಿಸಿಕೊಳ್ಳಬೇಕಿದೆ ಎಂದರು.
ಸಂಚಾಲಕ ವಿ.ಎಂ.ಶಿಂಗು ತ್ಯಾಗಲಿ, ಕಳೆದ 20 ವರ್ಷದಿಂದ ಈ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದರು.
ಅಧ್ಯಕ್ಷತೆಯನ್ನು ಶಿವರಾಮ ಅನಂತ ಹೆಗಡೆ ಕಾಗೇರಿ ವಹಿಸಿದ್ದರು.ಸ್ವರ್ಣವಲ್ಲೀ ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಜಿ.ವಿ.ಹೆಗಡೆ ಇತರರು ಇದ್ದರು.
ಯುವ ಪರಿಷತ್ ಅಧ್ಯಕ್ಷ ರಮೇಶ ಭಟ್ಟ ಸ್ವಾಗತಿಸಿದರು. ನರಸಿಂಹ ಹೆಗಡೆ ಅರೇಕಟ್ಟು ನಿರ್ವಹಿಸಿದರು. ಪ್ರಶಾಂತ ಭಟ್ಟ ಮಲವಳ್ಳಿ ವಂದಿಸಿದರು. ಶಿಬಿರದಲ್ಲಿ ಅರವತ್ತಕ್ಕೂ ಅಧಿಕ ದಂಪತಿಗಳು ಪಾಲ್ಗೊಂಡಿದ್ದರು.
ಸಂಸ್ಕೃತಿ ಉಳಿಸಿಕೊಳ್ಳುವುದರಲ್ಲಿ ಗೃಹಸ್ಥಾಶ್ರಮದ ಪಾತ್ರ ಬಹು ಮುಖ್ಯ:ಸ್ವರ್ಣವಲ್ಲೀ ಶ್ರೀ
