ಕಾರವಾರ: ಬಿಜೆಪಿ ಕಾರವಾರ ನಗರ ಮಂಡಲ ಹಾಗೂ ಗ್ರಾಮೀಣ ಮಂಡಲ ಯುವ ಮೋರ್ಚಾದಿಂದ ಕಾರವಾರದ ವಾರ್‌ಶಿಫ್ ಮ್ಯೂಸಿಯಂ ಆವರಣದಲ್ಲಿ ಹಮ್ಮಿಕೊಂಡ ಪರಮವೀರ ಚಕ್ರ ಗೌರವ ಪುರಸ್ಕೃತ ಮೇಜರ್ ರಾಮಾ ರಾಘೋಬಾ ರಾಣೆ ಅವರ ಜನ್ಮ ದಿನದ ಕಾರ್ಯಕ್ರಮದಲ್ಲಿ ಪುತ್ಥಳಿಗೆ ಶಾಸಕಿ ರೂಪಾಲಿ ಎಸ್.ನಾಯ್ಕ ಮಾಲಾರ್ಪಣೆ ಮಾಡಿದರು.
ನಂತರ ಮಾತನಾಡಿದ ಅವರು, ಪರಮವೀರ ಚಕ್ರ ಪುರಸ್ಕೃತ ಮೇ.ರಾಮಾ ರಾಘೋಬಾ ರಾಣೆ ಅವರ ಸಾಧನೆ ಅನನ್ಯ. ಅವರಂತೆ ಸೇನೆಯಲ್ಲಿ ಸೇವೆ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿಯವರು ಅಗ್ನಿಪಥ್ ಯೊಜನೆಯನ್ನು ಜಾರಿಗೆ ತಂದಿದ್ದಾರೆ ಎಂದು ಹೇಳಿದರು.
ಯುವ ಮೋರ್ಚಾದಿಂದ ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ಶ್ಲಾಘನೀಯ. ಯುವ ಜನರಿಗೂ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನು ಸರ್ಕಾರ ನೀಡಿದೆ. ಈ ಯೋಜನೆ ಜಾರಿಗೆ ತಂದ ಮಾನ್ಯ ಪ್ರಧಾನಿಗಳಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಮೇ.ರಾಘೋಬಾ ರಾಣೆ ಅವರ ಕುಟುಂಬದ ಸಮೀಪವರ್ತಿ ಚೆಂಡಿಯಾ ಗ್ರಾಮದ ಆನಂದು ನಾಯ್ಕ ಅವರಿಗೆ ಸನ್ಮಾನಿಸಲಾಯಿತು. ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ ಗುನಗಿ, ಯುವ ಮೊರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ ನಾಯ್ಕ, ಚೆಂಡಿಯಾ ಗ್ರಾಮ ಪಂಚಾಯತಿ ಅಧ್ಯಕ್ಷ ಜಿತೇಶ್ ಅರ್ಗೆಕರ, ನಗರ ಯುವ ಮೋರ್ಚಾ ಅಧ್ಯಕ್ಷ ಶುಭಂ ಕಳಸ, ಗ್ರಾಮೀಣ ಯುವ ಮೋರ್ಚಾ ಅಧ್ಯಕ್ಷ ಪ್ರಣಯ ರಾಣೆ, ಗ್ರಾಮೀಣ ಪ್ರಧಾನ ಕಾರ್ಯದರ್ಶಿ ಸುಜಾತಾ ಬಾಂದೇಕರ, ಗ್ರಾಮೀಣ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.