ಭಟ್ಕಳ: ತಾಲೂಕಿನ ಆಸರಕೇರಿಯ ನಾಮಧಾರಿ ಸಭಾಭವನದಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಶ್ರೀವೆಂಕಟೇಶ್ವರ ವಿದ್ಯಾವರ್ಧಕ ಸಂಘದಿಂದ ಹಮ್ಮಿಕೊಂಡಿದ್ದ 9ನೇ ವರ್ಷದ ಪಠ್ಯಪುಸ್ತಕ ವಿತರಣಾ ಸಮಾರಂಭವನ್ನು ಶಾಸಕ ಸುನೀಲ್ ನಾಯ್ಕ ಉದ್ಘಾಟಿಸಿದರು.
ನಂತರ ಮಾತನಾಡಿ,ವಿದ್ಯಾರ್ಥಿಗಳು ಕೇವಲ ಅಂಕಗಳಿಸುವುದಕ್ಕಾಗಿ ಶಿಕ್ಷಣ ಪಡೆಯುವ ಕೆಲಸ ಮಾಡದೆ ವ್ಯಕ್ತಿತ್ವ ವಿಕಸನಕ್ಕಾಗಿ ಶಿಕ್ಷಣ ಪಡೆಯುವಂತಾಗಬೇಕು ಎಂದುಹೇಳಿದರು.
ವಿದ್ಯಾರ್ಥಿಗಳು ತಮ್ಮ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ, ನಮ್ಮ ಸಂಸ್ಕೃತಿ, ಭಾಷೆ ಮುಂತಾದವುಗಳನ್ನು ಉಳಿಸಿ, ಬೆಳೆಸಿಕೊಂಡು ಉತ್ತಮ ಜ್ಞಾನ ಸಂಪಾದಿಸಿ, ಉತ್ತಮ ನಾಗರಿಕರಾಗಿ ಸಮಾಜದದಲ್ಲಿ ಒಳ್ಳೆ ವ್ಯಕ್ತಿಯಾಗಿ ರೂಪುಗೊಳ್ಳಬೇಕು. ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ನಾವು ಪಡೆಯುವ ಶಿಕ್ಷಣದ ಜ್ಞಾನವೇ ಶಾಶ್ವತ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕುಂದಾಪುರ ವಂಡ್ಸೆ ಸರಕಾರಿ ಕಾಲೇಜಿನ ಪ್ರಾಂಶುಪಾಲ ರಾಜೀವ ನಾಯ್ಕ ಮಾತನಾಡಿ, ಸತತ ಒಂಬತ್ತು ವರ್ಷಗಳ ಕಾಲ ಶ್ರೀವೆಂಕಟೇಶ್ವರ ವಿದ್ಯಾವರ್ಧಕ ಸಂಘವು ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ನೀಡಿ ಇಡೀ ಜಿಲ್ಲೆಗೆ ಮಾದರಿಯಾಗಿದೆ. ಈ ಸಂಘದ ಸದಸ್ಯರು ಎಲ್ಲರೂ ಒಟ್ಟಾಗಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶ ಇಟ್ಟುಕೊಂಡು ಇಂತಹ ಅಭೂತಪೂರ್ವ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಹಳೆಕೋಟೆ ಹನುಮಂತ ದೇವಸ್ಥಾನದ ಅಧ್ಯಕ್ಷ ಸುಬ್ರಾಯ ನಾಯ್ಕ, ವಿದ್ಯಾರ್ಥಿಗಳು ತಮ್ಮ ಶಿಕ್ಷಣದೊಂದಿಗೆ ನಮ್ಮ ಧಾರ್ಮಿಕತೆಯನ್ನು ಉಳಿಸಿ ಬೆಳೆಸುವಲ್ಲಿ ಆಸಕ್ತಿ ತೋರಿ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿ ಬೆಳೆಯಬೇಕು ಎಂದರು. ನಾಮಧಾರಿ ಸಮಾಜದ ಗೌರವಾಧ್ಯಕ್ಷ ಎಂ.ಆರ್.ನಾಯ್ಕ ಮಾತನಾಡಿ. ಮೆಟ್ರಿಕ್ ನಂತರದಲ್ಲಿ ವಿದ್ಯಾರ್ಥಿಗೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಉತ್ತಮ ಸಮಯ. ಈಗ ನಾವು ಮಾಡುವ ಪರಿಶ್ರಮ ಮುಂದಿನ ದಿನಗಳಲ್ಲಿ ಪ್ರತಿಫಲ ನೀಡುವುದು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷ ಗಂಗಾಧರ ನಾಯ್ಕ, ಸಮಾಜಕ್ಕೆ ಉಪಕಾರಿಯಾಗಿ ಕೆಲಸ ಮಾಡಿದಾಗ ಮಾತ್ರ ನಮ್ಮನ್ನು ಇತಿಹಾಸ ನೆನಪಿಸುತ್ತದೆ. ಅದರಂತೆ ವಿದ್ಯಾರ್ತಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ತಮ್ಮ ಶಿಕ್ಷಣದಲ್ಲಿ ಯಾರೂ ಮಾಡದ ಸಾಧನೆ ಮಾಡಿದಾಗ ಮಾತ್ರ ಸಮಾಜವು ನಮ್ಮನ್ನು ಗುರುತಿಸುತ್ತದೆ ಎಂದರು.
ಸರಕಾರಿ ಆಸ್ಪತ್ರೆಯ ವೈದ್ಯ ಡಾ.ಲಕ್ಷ್ಮಿಶ್ ನಾಯ್ಕ ಮಾತನಾಡಿದರು. ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಶ್ರೀವಂಕಟೆಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೆ.ಆರ್.ನಾಯ್ಕ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು. ಪ್ರಾರಂಭದಲ್ಲಿ ಮಂಜುನಾಥ ನಾಯ್ಕ ಪ್ರಾರ್ಥನೆ ಹಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಮನಮೋಹನ ನಾಯ್ಕ ಸ್ವಾಗತಿಸಿದರು. ಚಂದ್ರಶೇಖರ ನಾಯ್ಕ ವರದಿ ವಾಚಿಸಿದರು. ಜಗದೀಶ ನಾಯ್ಕ ದಾನಿಗಳ ಹೆಸರನ್ನು ಓದಿ ಹೇಳಿದರು. ರವಿ ನಾಯ್ಕ ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಸುನೀಲ್ ನಾಯ್ಕ, ಕಸಾಪ ಅಧ್ಯಕ್ಷ ಅಧ್ಯಕ್ಷ ಗಂಗಾಧರ ನಾಯ್ಕ ಹಾಗೂ ಬ್ಯಾಂಕ ಆಫ್ ಬರೋಡಾದ ಮುಖ್ಯ ವ್ಯವಸ್ಥಾಪಕ ಮೋಹನ ನಾಯ್ಕ, ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ 6ನೇ ರ‍್ಯಾಂಕ್ ಪಡೆದ ವಿದ್ಯಾರ್ಥಿ ಸುಜನ್ ನಾಯ್ಕನನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ದಿವಂಗತ ಬಾಬು ಮಾಸ್ತರ ಇವರ ಸ್ಮರಣಾರ್ಥ ಅವರ ಪುತ್ರಿ ಕಮಲಾ ನಾಯ್ಕ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಐವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದರು.
ಕೋಟ್…
ಗುರಿ ಮತ್ತು ಸತತ ಕಠಿಣ ಪರಿಶ್ರಮದಿಂದ ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತವರಾಗಬೇಕು. ಸರಕಾರ ಮಾಡಬೇಕಾದ ಕೆಲಸವನ್ನು ವಿದ್ಯಾವರ್ಧಕ ಸಂಘವು ನಿರಂತರವಾಗಿ 9 ವರ್ಷದಿಂದ ಮಾಡುತ್ತಿರುವುದು ಅದರ ಜನಪರ ಕಾಳಜಿಯನ್ನು ತೋರಿಸಿದೆ.–· ಸುನೀಲ್ ನಾಯ್ಕ, ಶಾಸಕ