ಕುಮಟಾ: ತಾಲೂಕಿನ ದೀವಗಿಯ ಚೇತನಾ ಸೇವಾ ಸಂಸ್ಥೆಯ ಆಶ್ರಯದಲ್ಲಿ ಮಣಕೋಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದಿಂದ ಸ್ವರ್ಣಿಮ ಭಾರತದೆಡೆಗೆ ಎನ್ನುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ನಿವೃತ್ತ ಎಸ್‌ಪಿ ಎನ್.ಟಿ.ಪ್ರಮೋದ ರಾವ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ನಮ್ಮ ದೇಶದ ಮೇಲೆ ನಮಗೆ ಗೌರವ, ಪ್ರೀತಿ, ಅಭಿಮಾನ ಹೆಚ್ಚಿದಾಗಲೇ ನಮ್ಮ ಹಿರಿಯರು ಸ್ವಾತಂತ್ರ್ಯ ಗಳಿಸಲು ಮಾಡಿದ ತ್ಯಾಗ, ಬಲಿದಾನಕ್ಕೆ ಅರ್ಥ ಬರುವುದು. ಆಗಲೇ ಸಮೃದ್ಧ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಲು ಸಾಧ್ಯ ಮತ್ತು ಇಂತಹ ಸಂಘಟನೆಗಳ ನಿಸ್ವಾರ್ಥ ಸೇವೆಯ ಸಾರ್ಥಕತೆಗೆ ಬೆಲೆ ನೀಡಿದಂತಾಗುವುದು ಎಂದರು.
ಸ್ವಾತಂತ್ರ್ಯ ಅಮೃತ ಮಹೋತ್ಸವದಿಂದ ಸ್ವರ್ಣಿಮ ಭಾರತದೆಡೆಗೆ ಎನ್ನುವ ವಿಷಯದ ಕುರಿತಾಗಿ ಚೇತನಾ ಸೇವಾ ಸಂಸ್ಥೆಯ ಸಂಚಾಲಕಿ ಎ ಆರ್ ಭಾರತಿ ಉಪನ್ಯಾಸ ನೀಡಿದರು. ಶಾಲಾ ಎಸ್‌ಡಿಎಮ್‌ಸಿ ಅಧ್ಯಕ್ಷ ಮಾದೇವ ಗೌಡ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷೆ ನೇತ್ರಾವತಿ ಆರ್ ನಾಯ್ಕ, ಮುಖಂಡರಾದ ಬೀರಾ ರಾಮಕೃಷ್ಣ ಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ದೇಶ ರಕ್ಷಣೆಗಾಗಿ ಸೈನಿಕನಾಗಿ ಸೇವೆ ಸಲ್ಲಿಸಿ ನಿವೃತ್ತನಾದ ಮಣಕೋಣದ ರಾಜೇಂದ್ರ ಶ್ರೀಪತಿ ನಾಯ್ಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಗೀತಾ ಎನ್.ಶೆಟ್ಟಿ ಸ್ವಾಗತಿಸಿದರು. ಚೇತನಾ ಸೇವಾ ಸಂಸ್ಥೆಯ ಅಧ್ಯಕ್ಷ ಆರ್.ಕೆ.ಅಂಬಿಗ ಕಾರ್ಯಕ್ರಮ ನಿರ್ವಹಿಸಿದರು. ಸಹಶಿಕ್ಷಕಿಯರಾದ ಕಲ್ಪನಾ ಪಟಗಾರ, ಮರಿಯಾ ನೊರೊನ್ಹಾ, ಮಮತಾ ಎಲ್.ಅಂಬಿಗ ಸಹಕರಿಸಿದರು. ಈ ಸಂದರ್ಭದಲ್ಲಿ ಭಾಗಿಯಾದ ಮಕ್ಕಳು, ಪಾಲಕರು ಎಲ್ಲರನ್ನೊಳಗೊಂಡು ಮಾತೃಭೂಮಿಗಾಗಿ ಪ್ರತಿಜ್ಞೆ ಮಾಡಲಾಯಿತು.