ಕಾರವಾರ: ಚಂದಾವರ -ಕುಮಟಾ ಹೆದ್ದಾರಿ ಪಕ್ಕದ ಮೋರಿಗಳನ್ನು ಕಿಡಿಗೇಡಿಗಳು ಮುಚ್ಚಿದ ಕಾರಣ ಎಲ್ಲ ಮಳೆಯ ನೀರು ಒಂದೇ ಮೋರಿ ಮೂಲಕ ನುಗ್ಗಿ ಸುತ್ತಮುತ್ತಲಿನ ಪ್ರದೇಶದ ಜಮೀನು ಹಾಗೂ ಮನೆಗಳಿಗೆ ನುಗ್ಗುತ್ತಿದ್ದು, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಕುಮಟಾ ತಾಲೂಕಿನ ಹಾರೋಡಿ, ವಾಲಗಳ್ಳಿ ಗ್ರಾಮದ ರೈತರು ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿ ಆಗ್ರಹಿಸಿದರು.
ಚಂದಾವರ ಕುಮಟಾ ರಸ್ತೆಯ ಹಾರೋಡಿ ಕ್ರಾಸ್ ಬಳಿ ಪಿಡಬ್ಲುಡಿ ಇಲಾಖೆಯ ರಾಜ್ಯ ಹೆದ್ದಾರಿ ಪಕ್ಕದಲ್ಲಿ 3ಮೋರಿಗಳನ್ನು ನಿರ್ಮಿಸಲಾಗಿದೆ. ಆದರೆ ಸುಮಾರು 700 ಮೀಟರ್ ಉದ್ದದ ರಸ್ತೆಯಲ್ಲಿ ಮೊದಲನೇ ಹಾಗೂ ಎರಡನೆಯ ಮೋರಿಗಳನ್ನು ಯಾರೋ ಕಿಡಿಗೇಡಿಗಳು ಅಕ್ರಮವಾಗಿ ಸಂಪೂರ್ಣವಾಗಿ ಕಲ್ಲಿನಿಂದ ಮುಚ್ಚಿ ನೀರು ರಸ್ತೆಯ ಮತ್ತೊಂದು ಬದಿಗೆ ಹೋಗದಂತೆ ಬಂದ್ ಮಾಡಿದ್ದಾರೆ.
ಈ ಅವ್ಯವಸ್ಥೆಯನ್ನು ಸರಿಪಡಿಸಲು ಮೇ.22 ರಂದು ನಡೆದ ಕಾರ್ಯಾಚರಣೆಯಲ್ಲಿ ಸ್ಥಳದಲ್ಲಿ ಹಾಜರಿದ್ದ ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿಗಳು ಪೊಲೀಸರ ಸಮಕ್ಷಮದಲ್ಲಿ 3 ನೇ ಮೋರಿಯಿಂದ ಅವೈಜ್ಞಾನಿಕವಾಗಿ ನೀರು ಹರಿಬಿಡಲು ಸೂಚಿಸಿದ್ದಾರೆ.
ಆದರೆ ಅಧಿಕಾರಿಗಳ ಈ ನಿರ್ಧಾರದಿಂದಾಗಿ 3 ನೇ ಮೋರಿ ಕೆಳಭಾಗದ ರೈತರ ನೂರಾರು ಎಕರೆ ಅಡಿಕೆ, ಭತ್ತ, ತೆಂಗಿನ ಬೆಳೆಗೆ ಹಾನಿಯಾಗುತ್ತಿದೆ. ಅಲ್ಲದೇ ಅಕ್ಕ- ಪಕ್ಕದಲ್ಲಿ ವಾಸಿಸುತ್ತಿರುವ ಹಲವು ಮನೆಗಳಿಗೆ ನೀರು ನುಗ್ಗುತ್ತಿದ್ದು ಜೀವನ ನಡೆಸುವುದಕ್ಕೆ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ಆಗಿರುವ ಸಮಸ್ಯೆಯನ್ನು ಬಗೆಹರಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಮನವಿಯಲ್ಲಿ ಆಗ್ರಹಿಸಿದ್ದಾರೆ.