ಕುಮಟಾ: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಉತ್ತರಕನ್ನಡ ಜಿಲ್ಲಾ ಪ್ರತಿನಿಧಿ ಆಯ್ಕೆಗೆ ಸರ್ವಾನುಮತದಿಂದ ಈ ಬಾರಿ ಘಟ್ಟದ ಕೆಳಗಿನ ತಾಲೂಕುಗಳಿಗೆ ಆದ್ಯತೆ ನೀಡಬೇಕು ಎಂದು ಕೆನರಾ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ಅರವಿಂದ ಪೈ ವಿನಂತಿಸಿದ್ದಾರೆ.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಜಿಲ್ಲಾ ಪ್ರತಿನಿಧಿ ಆಯ್ಕೆಗೆ ಜುಲೈ 24ರಂದು ಚುನಾವಣೆ ನಡೆಯುವುದಾಗಿ ತಿಳಿದುಬಂದಿದೆ. ಸಂಯುಕ್ತ ಸಹಕಾರಿಯ ಆರಂಭವಾದ ಇಂದಿನವರೆಗೆ ಕಳೆದ ನಾಲ್ಕು ಅವಧಿಯಲ್ಲಿ ಜಿಲ್ಲೆಯ ಘಟ್ಟದ ಮೇಲಿನ ಪ್ರತಿನಿಧಿಗಳೆ ಆಯ್ಕೆಯಾಗಿದ್ದು, ಘಟ್ಟದ ಕೆಳಗಿನ ಸೌಹಾರ್ದ ಸಹಕಾರಿ ಪ್ರತಿನಿಧಿಗಳು ಇವರಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಜಿಲ್ಲೆಯಲ್ಲಿ ಘಟ್ಟದ ಕೆಳಗೆ 57 ಸೌಹಾರ್ದ ಸಹಕಾರಿಗಳು ಮತ್ತು ಘಟ್ಟದ ಮೇಲೆ 43 ಸಹಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಅಂಕಿ ಅಂಶಗಳ ಪ್ರಕಾರ ಘಟ್ಟದ ಕೆಳಗೆ ಹೆಚ್ಚು ಸೌಹಾರ್ದ ಸಹಕಾರಿಗಳು ಆರಂಭವಾಗುತ್ತಿರುವುದನ್ನು ಸೂಚಿಸುತ್ತವೆ. ಈ ಬಾರಿ ಘಟ್ಟದ ಕೆಳಗಿನ ಓರ್ವ ಸಹಕಾರಿಗೆ ಜಿಲ್ಲಾ ಪ್ರತಿನಿಧಿ ಆಗಲು ನಾವೆಲ್ಲ ಸರ್ವಾನುಮತದಿಂದ ನಿರ್ಣಯಿಸಿ ಸೌಹಾರ್ದಯುತವಾಗಿ ನಮ್ಮ ಜಿಲ್ಲೆಯ ಪ್ರತಿನಿಧಿಯನ್ನು ಆಯ್ಕೆ ಮಾಡೋಣ ಎಂದು ಜಿಲ್ಲೆಯ ಎಲ್ಲಾ ಸೌಹಾರ್ದ ಸಹಕಾರಿ ಪ್ರತಿನಿಧಿಗಳಲ್ಲಿ ವಿನಂತಿಸಿದ್ದಾರೆ.
ಘಟ್ಟದ ಕೆಳಗಡೆ ಸಹಕಾರಿ ಕ್ಷೇತ್ರದಲ್ಲಿ ಹಲವಾರು ವ್ಯಕ್ತಿಗಳು ಸಾಕಷ್ಟು ವರ್ಷಗಳಿಂದ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ ನಾಯಕ, ಸಹಕಾರಿ ಧುರೀಣ ಜಿ.ಜಿ.ಶಂಕರ ಸೇರಿದಂತೆ ಹಲವಾರು ವ್ಯಕ್ತಿಗಳಿದ್ದಾರೆ. ಆ ಕಾರಣ ಈ ಬಾರಿ ಘಟ್ಟದ ಕೆಳಗಿನ ಸಹಕಾರಿಗಳಿಗೆ ಆದ್ಯತೆ ಮೇರೆಗೆ ಸೌಹಾರ್ದಯುತವಾಗಿ ನಾವೆಲ್ಲ ಸರ್ವಾನುಮತದಿಂದ ನಿರ್ಣಯಿಸಿ, ಆಯ್ಕೆ ಮಾಡೋಣ ಎಂದು ಪ್ರಕಟಣೆಯಲ್ಲಿ ಸಲಹೆ ನೀಡಿದ್ದಾರೆ.