ಭಟ್ಕಳ: ಇಲ್ಲಿನ ತಾಲೂಕು ಪಂಚಾಯತ ಎದುರಿನ ಮೈದಾನದಲ್ಲಿ ಕೇಂದ್ರದ ಅಗ್ನಿಪಥ್ ಯೋಜನೆ ವಿರುದ್ಧ ಭಟ್ಕಳ ಬ್ಲಾಕ್ ಕಾಂಗ್ರೆಸ್ ಸೋಮವಾರದಂದು ಹಮ್ಮಿಕೊಂಡಿದ್ದ ಧರಣಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಐವನ್ ಡಿಸೋಜಾ ಪಾಲ್ಗೊಂಡು ಮಾತನಾಡಿದರು.
ಕೇಂದ್ರ ಸರಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆಯು ದೇಶದ ಸೇನಾಬಲಕ್ಕೆ ಮಾರಕವಾಗುವುದರೊಂದಿಗೆ ಯುವಕರ ಬದುಕನ್ನು ಬೀದಿಗೆ ತಂದು ನಿಲ್ಲಿಸುತ್ತದೆ. ಇದು ಯುವಕರ ಭವಿಷ್ಯಕ್ಕೆ ಮತ್ತು ದೇಶದ ಅಭಿವೃದ್ಧಿಗೆ ಮಾರಕವಾಗಿದ್ದು, ಶೀಘ್ರವಾಗಿ ಇದನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರಕಾರ ಯಾವಾಗಲು ದೇಶಕ್ಕೆ ಮಾರಕವಾದ ಯೋಜನೆಯನ್ನೆ ಜಾರಿಗೆ ತರುತ್ತಿದೆ. ರಾಜ್ಯ ಸರಕಾರಗಳೊಂದಿಗೆ ಸೇರಿ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕಾಗಿದ್ದರು ಸಹ ಕೆಲವೊಮ್ಮೆ ಹೇರಿಕೆ ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವದಲ್ಲಿ ವಿಪರ್ಯಾಸ ಎಂದ ಅವರು, ಕೇವಲ ನಾಲ್ಕು ವರ್ಷಗಳ ಕಾಲ ಸೈನ್ಯದಲ್ಲಿ ಸೇವೆ ಮಾಡಿ ನಿವೃತ್ತಿ ಹೊಂದಿ ವಾಪಸ್ಸು ಬಂದ ಮೇಲೆ ಅವರ ಜೀವನದ ಕಥೆ ಏನು ಎಂಬುದಕ್ಕೆ ಸರಕಾರದಲ್ಲಿ ಉತ್ತರವಿಲ್ಲ. ಒಂದು ರೀತಿ ಜನರ ಮೇಲೆ ಯೋಜನೆಗಳನ್ನು ಸರಕಾರವೇ ಒತ್ತಾಯಪೂರ್ವಕವಾಗಿ ಹೇರುತ್ತಿದೆ ಎಂದು.
ಮಾಜಿ ಸಚಿವ ಆರ್.ಎನ್.ನಾಯ್ಕ ಮಾತನಾಡಿ, ಕೇಂದ್ರ ಸರಕಾರವು ಈ ಯೋಜನೆಗಳಿಂದ ಯುವಕರಿಗೆ ಶಾಲು ಹೊದಿಸಿ ಮನಸ್ಸು ಬದಲಾಯಿಸುವ ಉದ್ದೇಶ ಹೊಂದಿದೆ. ಶಾಲು ಹೊದಿಸಿಕೊಳ್ಳುತ್ತೀರೋ ಅಥವಾ ಸ್ವಂತ ಬಲದಲ್ಲಿ ಉದ್ಯೋಗ ಹುಡುಕಿ ಜೀವನ ಕಟ್ಟಿಕೊಳ್ಳುತ್ತೀರಾ ಎಂಬುದನ್ನು ಯುವಕರೇ ತೀರ್ಮಾನಿಸಬೇಕು. ಉಳ್ಳವರು ತಮ್ಮ ಮಕ್ಕಳಿಗೆ ಉತ್ತಮ ಜೀವನ ಕಟ್ಟಿಕೊಡುತ್ತಾರೆ. ಈ ತರಹ ಯೋಜನೆಯಲ್ಲಿ ಮಧ್ಯಮ ಹಾಗೂ ಬಡ ವರ್ಗದ ಜನರ ಮಕ್ಕಳೇ ಬಲಿಯಾಗಲಿದ್ದಾರೆ ಎಂಬುದರ ಬಗ್ಗೆ ಎಚ್ಚರಿಕೆ ಇರಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕ, ಕೇಂದ್ರ ಸರಕಾರಕ್ಕೆ ಜನಸಾಮಾನ್ಯರು ಹಾಗೂ ಯುವಕರು ಮುಂದೆ ಬಂದು ಅವರು ಉದ್ಧಾರ ಆಗುವುದು ಇಷ್ಟವಿಲ್ಲ. ಸ್ವಾರ್ಥ ರಾಜಕಾರಣಕ್ಕಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಜನರ ಜೊತೆ ಚೆಲ್ಲಾಟ ಆಡುತ್ತಿದೆ. ಸೇನಾ ನೇಮಕಾತಿಯೆಂದರೆ ಸಾಮಾನ್ಯವೇ? ಅದಕ್ಕೆ ಅದರದ್ದೇ ಆದ ನಿಯಮವಿದೆ ಹಾಗೂ ದೈಹಿಕ, ಮಾನಸಿಕ ಬಲದ ಅವಶ್ಯಕತೆ ಇದೆ. ಇದನ್ನು ಇಂದಿನ ಯುವಕರು ಆಲೋಚಿಸಬೇಕು ಎಂದರು.
ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ನಾಯ್ಕ, ಮಾಜಿ ಶಾಸಕರಾದ ಮಂಕಾಳ ವೈದ್ಯ, ಜೆ.ಡಿ.ನಾಯ್ಕ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಮಜಿದ್, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಈಶ್ವರ ನಾಯ್ಕ, ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕೋಟ್…
ಸೇನೆಯ ವಿಚಾರದಲ್ಲಿ ಕೇಂದ್ರ ಸರಕಾರ ಹಾಗೂ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು. ಯುವಕರು ತಮ್ಮ ಕಾಲೇಜು ಶಿಕ್ಷಣ ಪೂರ್ಣಗೊಳ್ಳುವವರೆಗೆ ಸೇನೆಗೆ ಸೇರಿ ಅಲ್ಲಿಂದ ನಾಲ್ಕೇ ವರ್ಷದಲ್ಲಿ ನಿವೃತ್ತಿಯಾಗಿ ಹೊರಬಂದರೆ ಅವರ ಪಿಯುಸಿ ವಿದ್ಯಾಭ್ಯಾಸಕ್ಕೆ ಯಾವ ಕೆಲಸ ಸಿಗುತ್ತದೆ ಎಂಬದನ್ನು ಸರಕಾರವೇ ಮೊದಲು ಯುವಕರಿಗೆ ತಿಳಿಸಬೇಕು. ಸರ್ಕಾರ ಉದ್ಯೋಗ ಸೃಷ್ಟಿಯ ಹೆಸರಿನಲ್ಲಿ ಸುಳ್ಳು ಭರವಸೆ ನೀಡುತ್ತಿದೆ.– ಐವನ್ ಡಿಸೋಜಾ, ಕೆಪಿಸಿಸಿ ಉಪಾಧ್ಯಕ್ಷ
ಬಿಜೆಪಿಯಲ್ಲಿರುವ ಸಾಕಷ್ಟು ಯುವಕರು ಕಾಂಗ್ರೆಸ್ ಮೂಲದಿಂದಲೇ ಹೋಗಿದ್ದು ಹೊರತಾಗಿ ಅಲ್ಲಿ ಯಾವುದೇ ಸ್ವಂತಿಕೆ ಇಲ್ಲ. ಕಾಂಗ್ರೆಸ್ ಪಕ್ಷ ಬಲವಾಗಬೇಕಾದರೆ ಯುವಕರಿಗೆ ಯೋಜನೆಯ ಬಗ್ಗೆ ಮಾಹಿತಿ ನೀಡುವುದನ್ನು ಹಾಗೂ ಜನವಿರೋಧಿ ನೀತಿಗಳನ್ನು ಖಂಡಿಸುವುದನ್ನು ಕಲಿಸಬೇಕು. ಆಗಲೇ ಕಾಂಗ್ರೆಸ್ ಉಳಿಯಲು ಸಾಧ್ಯ.– ಆರ್.ಎನ್.ನಾಯ್ಕ, ಮಾಜಿ ಸಚಿವ