ಅಂಕೋಲಾ: ತಾಲೂಕಿನ ಮಂಜಗುಣಿ ಗ್ರಾಮದ ಬಂದರು ವಿಸ್ತರಣೆಗೆ ಆಗ್ರಹಿಸಿ ಮತ್ತು ಹಿನ್ನೀರು ತಡೆಗೋಡೆ ನಿರ್ಮಾಣಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬೋಟ್ ಮಾಲಕ ಹಾಗೂ ಕಾರ್ಮಿಕರ ವತಿಯಿಂದ ಮೀನುಗಾರಿಕೆ ಸಚಿವ ಎಸ್.ಅಂಗಾರ ಅವರಿಗೆ ಮನವಿ ಸಲ್ಲಿಸಿದರು.
ಮಂಜಗುಣಿ ಗ್ರಾಮದಲ್ಲಿ ಮೀನುಗಾರಿಕೆ ಮಾಡುವ ಸುಮಾರು 30 ಬೋಟ್‌ಗಳಿವೆ. ಆದರೆ ಇಲ್ಲಿಯ ಬಂದರು ಕಿರಿದಾಗಿರುವುದರಿಂದ ಬೇಲೆಕೇರಿ, ಮುದಗಾ, ಕಾರವಾರ, ತದಡಿ ಹೀಗೆ ಬೇರೆ ಬೇರೆ ಬಂದರುಗಳನ್ನು ಅವಲಂಬಿಸಬೇಕಾಗಿದೆ. ಇದರಿಂದಾಗಿ 20 ರಿಂದ 30 ಕಿ.ಮೀ. ಹೆಚ್ಚುವರಿಯಾಗಿ ಕ್ರಮಿಸಬೇಕಾಗಿದೆ. ಕೆಲವೇ ಬೋಟ್‌ಗಳು ಮಾತ್ರ ಈ ಬಂದರಿಗೆ ಬಂದು ಮೀನು ಖಾಲಿ ಮಾಡುತ್ತವೆ. ಬಂದರು ಪ್ರದೇಶವೂ ಕೂಡ ಕಿರಿದಾಗಿರುವುದರಿಂದ ವಾಹನ ಮುಂದೆ ಹೋಗಲು ಸಾಧ್ಯವಾಗುತ್ತಿಲ್ಲ.
ಮಂಜಗುಣಿಯಲ್ಲಿ ಬಂದರು ವಿಸ್ತರಣೆಯಾದರೆ ಬೋಟ್‌ನವರಿಗೆ ಅನುಕೂಲವಾಗುವುದರ ಜತೆಗೆ ಕಾರ್ಮಿಕರಿಗೆ ಹಾಗೂ ಪ್ರತ್ಯಕ್ಷ, ಪರೋಕ್ಷವಾಗಿ ನೂರಾರು ಜನರಿಗೆ ಉದ್ಯೋಗ ದೊರೆಯುತ್ತದೆ. ಈಗಾಗಲೇ 60 ಮೀ. ಜಟ್ಟಿ ನಿರ್ಮಾಣ ಮಾಡಿದ್ದು, ಇದು ಎಲ್ಲಿಯೂ ಸಾಲುತ್ತಿಲ್ಲ. ಕನಿಷ್ಠ 150 ಮೀ. ತುರ್ತು ವಿಸ್ತರಣೆಯ ಅವಶ್ಯಕತೆಯಿದೆ. ಮಂಜಗುಣಿ-ಗಂಗಾವಳಿ ಈ ಎರಡೂ ಊರಿನ ನದಿ ದಂಡೆಯಲ್ಲಿ ಹಿನ್ನೀರು ತಡೆಗೋಡೆ ಮಾಡಿದರೆ ವರ್ಷವಿಡೀ ಮೀನುಗಾರಿಕೆ ಮಾಡಬಹುದು. ಹೀಗಾಗಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಇದ್ದರು. ಮೀನುಗಾರರ ಮುಖಂಡರಾದ ರಾಮಚಂದ್ರ ತಾಂಡೇಲ, ಪ್ರಕಾಶ ಎನ್.ತಾಂಡೇಲ, ಗಣಪತಿ ತಾಂಡೇಲ, ಮಾರುತಿ ತಾಂಡೇಲ, ಸುಶಾಂತ ತಾಂಡೇಲ, ನೀಲಕಂಠ ತಾಂಡೇಲ, ಗಣಪತಿ ತಾಂಡೇಲ, ಸಂತೋಷ ತಾಂಡೇಲ ಸೇರಿದಂತೆ ಹಲವರು ಉಪಸ್ಥಿತರಿದ್ದು, ತಮ್ಮ ಸಮಸ್ಯೆಯನ್ನು ವಿವರಿಸಿದರು.