ಸಿದ್ದಾಪುರ: ಪಟ್ಟಣದ ಎಂ.ಜಿ.ಸಿ. ಕಲಾ, ವಾಣಿಜ್ಯ ಹಾಗೂ ಜಿ.ಎಚ್.ಡಿ. ವಿಜ್ಞಾನ ಮಹಾವಿದ್ಯಾಲಯ, ಸಿದ್ದಾಪುರದ ಕನ್ನಡ ಸಂಘ, ಸ್ಪಂದನ ಸಾಗರ ಹಾಗೂ ಚಿಂತನ ಉತ್ತರ ಕನ್ನಡ ಇವುಗಳ ಆಶ್ರಯದಲ್ಲಿ ಮಹಾವಿದ್ಯಾಲಯದ ಎ.ವಿ.ಹಾಲ್‌ನಲ್ಲಿ ಡಾ.ವಿಠ್ಠಲ ಭಂಡಾರಿಯವರ ಜನ್ಮ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಅವರ ‘ಆಶಯಗಳ ಬೆಳಕಿನಲಿ ‘ಒಂದು ದಿನದ ರಂಗ ಶಿಬಿರ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ ಭಾಗವಹಿಸಿ ಮಾತನಾಡಿದರು
ಒಬ್ಬ ಉಪನ್ಯಾಸಕನಿಗೆ ವಿಷಯದ ಬಗ್ಗೆ ಪ್ರೀತಿ ಮತ್ತು ವೃತ್ತಿ ನಿಷ್ಠೆ ಬಹಳ ಪ್ರಮುಖವಾದುದು. ಅದು ಡಾ.ವಿಠ್ಠಲ ಭಂಡಾರಿಯವರಿಗೆ ಇತ್ತು. ಇಂತಹ ವ್ಯಕ್ತಿಗಳು ಬಹಳ ವಿರಳ. ಇಂತಹ ವೃತ್ತಿಯಲ್ಲಿ ಜೀವಿಸುವ ವ್ಯಕ್ತಿ ನಮ್ಮ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದರು ಎನ್ನುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಕನ್ನಡ ಭಾಷೆಯ ಬಗ್ಗೆ ಪ್ರೀತಿ ಇರಿಸಿಕೊಂಡಾಗ ಸಮುದಾಯ ಸಂಸ್ಕೃತಿಗಳ ಬಗ್ಗೆ ಕಾಳಜಿ ಮೂಡುತ್ತದೆ. ಈ ಹಿನ್ನೆಯಲ್ಲಿ ರಂಗ ಕಲೆ ಜೀವನ ಶಿಕ್ಷಣವನ್ನು ಕಲಿಸುತ್ತದೆ. ರಂಗಭೂಮಿಯ ಅರಿವು ಇಂದಿನ ವಿದ್ಯಾರ್ಥಿಗಳಿಗೆ ಬಹಳ ಮುಖ್ಯ. ಇಂದು ಡಾ.ವಿಠ್ಠಲ ಭಂಡಾರಿಯವರ ಜನ್ಮ ದಿನದ ಪ್ರಯುಕ್ತ ಹಮ್ಮಿಕೊಂಡ ರಂಗ ಶಿಬಿರ ಅತ್ಯಂತ ಅರ್ಥಪೂರ್ಣವಾಗಿದೆ ಎಂದರು.
ಪ್ರಾಚಾರ್ಯರಾದ ಪ್ರೊ.ಜಯಂತಿ ಶಾನಭಾಗ್ ಅಧ್ಯಕ್ಷತೆ ವಹಿಸಿದ್ದರು. ಚಿಂತಕರಾದ ಯಮುನಾ ಗಾಂವ್ಕರ್‌ರವರು ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕರಾದ ಮಾಧವಿ ಭಂಡಾರಿಯವರು ಸಂವಿಧಾನದ ಪೂರ್ವ ಪೀಠಿಕೆಯನ್ನು ಬೋಧಿಸಿ, ಪ್ರಾಸಂಗಿಕವಾಗಿ ಮಾತನಾಡಿದರು. ಶಿಬಿರದ ರಂಗ ನಿರ್ದೇಶಕಿ ಪ್ರತಿಭಾ ಎಂ.ವಿ. ಉಪಸ್ಥಿತರಿದ್ದರು.
ಬಿ.ಎ., ಬಿ.ಕಾಂ.,ಬಿ.ಎಸ್ಸಿ. ಪ್ರಥಮ, ದ್ವಿತೀಯ, ತೃತೀಯ ವರ್ಷದಲ್ಲಿ ಕನ್ನಡ ವಿಷಯಕ್ಕೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಮತ್ತು ಪುಸ್ತಕ ಬಹುಮಾನವನ್ನು ಯಮುನಾ ಗಾಂವ್ಕರ್ ಮತ್ತು ಕುಟುಂಬದವರು ನೀಡಿದರು. ಪ್ರೊ.ಜಗನ್ನಾಥ ಮೊಗೇರ ಸ್ವಾಗತಿಸಿದರು. ಶ್ರೀಲಕ್ಷ್ಮಿ ಮತ್ತು ಸಂಗಡಿಗರು ರಂಗಗೀತೆ ಹಾಡಿದರು. ನವ್ಯಾ ಭಟ್ ನಿರೂಪಿಸಿದರು. ವಾಣಿ ನಾಯ್ಕ ವಂದಿಸಿದರು.
ಒಂದು ದಿನ ರಂಗ ಶಿಬಿರದಲ್ಲಿ 84 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಪ್ರತಿಭಾ ಎಂ.ವಿ ರಂಗ ನಿರ್ದೇಶಕರಾಗಿ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಮಧ್ಯಾಹ್ನ ಶಿಬಿರ ಸಮಾರೋಪ ಸಮಾರಂಭ ನಡೆಯಿತು. ಇದರ ಅಧ್ಯಕ್ಷತೆಯನ್ನು ಡಾ.ಎಸ್.ಎಸ್.ಗುತ್ತಿಕರ್ ವಹಿಸಿದ್ದರು. ಶಿಬಿರಾರ್ಥಿಗಳು ಅನಿಸಿಕೆಯನ್ನು ಹೇಳಿದರು. ಪ್ರತಿಭಾ ಎಂ.ವಿ.ಯವರು ಪ್ರಾಸಂಗಿಕವಾಗಿ ಮಾತನಾಡಿದರು. ಭಾವನಾ ಹೆಗಡೆ ನಿರೂಪಿಸಿದರು. ವಿನಾಯಕ ಎಂ.ಹೆಗಡೆ ವಂದಿಸಿದರು.