ಕಾರವಾರ: ಜನೋಪಯೋಗಿ ಕಾಮಗಾರಿ ವಿಚಾರದಲ್ಲಿ ವಿಳಂಬ ಧೋರಣೆ ಅನುಸರಿಸದೆ ಆದಷ್ಟು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ಈಗ ಕೈಗೊಂಡ ಹೆದ್ದಾರಿ ಕಾಮಗಾರಿಯಲ್ಲಿ ತಾಂತ್ರಿಕ ಅಡಚಣೆ ಹಾಗೂ ವಿಳಂಬವಾದ ಕುರಿತು ವಿಸ್ತೃತ ವರದಿ ನೀಡುವಂತೆ ಸಂಸದ ಅನಂತಕುಮಾರ ಹೆಗಡೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಸೋಮವಾರ ರಸ್ತೆ (ಎನ್‌ಎಚ್ 66) ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಐಆರ್‌ಬಿ ಸಂಸ್ಥೆಯ ಮೂಲಕ ಕೈಗೊಳ್ಳಲಾದ ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಜಿಲ್ಲೆಯ ಜನತೆಗೆ ಅಸಮಾಧಾನವಿದೆ. ಶೀಘ್ರವಾಗಿ ರಸ್ತೆ ಕಾಮಗಾರಿ ಹಾಗೂ ಫ್ಲೈಓವರ್, ಅಂಡರ್‌ಪಾಸ್‌ಗಳನ್ನು ಪೂರ್ಣಗೊಳಿಸಿ ಜನತೆಗೆ ಅನುಕೂಲವಾಗುವಂತೆ ಕ್ರಮಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಮಳೆಗಾಲದ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕಾಲ ವಿಳಂಬ ಮಾಡದೇ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮುಚ್ಚಿರುವ ನಾಲೆಗಳನ್ನು ತೆರವುಗೊಳಿಸಬೇಕು, ಇಲ್ಲವೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಎನ್‌ಎಚ್‌ಎಐ, ಕೊಂಕಣ ರೈಲ್ವೇ ಹಾಗೂ ನೌಕಾ ಸಿಬ್ಬಂದಿ ಈ ಕಾರ್ಯವನ್ನು ಸಮನ್ವಯತೆಯಿಂದ ಮಾಡಬೇಕು ಹಾಗೂ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಿ ಕಾಮಗಾರಿ ಬೇಗ ಪೂರ್ಣಗೊಳ್ಳುವಂತೆ ಮಾಡಬೇಕು ಎಂದು ತಿಳಿಸಿದರು.
ಅಗತ್ಯ ರಸ್ತೆ ಸುರಕ್ಷತಾ ಫಲಕಗಳನ್ನು ಅಳವಡಿಸುವ ಮೂಲಕ ಜನರ ಪ್ರಾಣ ಹಾನಿಯನ್ನು ತಪ್ಪಿಸಬೇಕು. ಅಗತ್ಯವಾದ ಕಡೆಗಳಲ್ಲಿ ಅಂಡರ್‌ಪಾಸ್ ಮತ್ತು ಫ್ಲೈಓವರ್ ಗಳನ್ನು ತ್ವರಿತವಾಗಿ ನಿರ್ಮಿಸಬೇಕು. ಎಲ್ಲಕ್ಕೂ ಮುಖ್ಯವಾಗಿ ಕಾಮಗಾರಿಯಲ್ಲಿ ಬದ್ಧತೆಯನ್ನು ಕಾಪಾಡಿಕೊಳ್ಳುವ ಮೂಲಕ ಕಾಮಗಾರಿಯನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಸೂಚಿಸಿದರು.
ಇಲ್ಲಿಯವರೆಗೆ ಐಆರ್‌ಬಿ ಕೈಗೊಂಡ ಕಾಮಗಾರಿಯ ಕುರಿತು ವಿಸ್ತೃತ ವರದಿ ನೀಡುವಂತೆ ಎನ್‌ಎಚ್‌ಎ ಐ ಅಧಿಕಾರಿಗೆ ಸೂಚಿಸಿದರು. ಜುಲೈ 5 ರೊಳಗಾಗಿ ಈ ಕಾಮಗಾರಿ ಕುರಿತಾದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಬೇಕು ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಐಆರ್‌ಬಿ ಹಾಗೂ ಎನ್‌ಎಚ್‌ಎಐ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕಿ ರೂಪಾಲಿ ನಾಯ್ಕ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್, ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.