ಶಿರಸಿ:ನಿವೃತ್ತ ಯೋಧರ ಎದುರಿಗಿರುವ ಹಲವಾರು ಸಮಸ್ಯೆಗಳು ಜೀವಂತವಿರುವಾಗ ಮತ್ತೆ ನಿರುದ್ಯೋಗ ಸಮಸ್ಯೆ ಹೆಚ್ಚಿಸುವ ಅಗ್ನಿಪಥದತಹ ಯೋಜನೆ ಅನುಷ್ಠಾನ ಸರಿಯಲ್ಲ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ದೀಪಕ ದೊಡ್ಡೂರು ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹೊಸ ಯೋಜನೆ ತರುವಾಗಿ ಸಾರ್ವಜನಿಕವಾಗಿ ಚರ್ಚೆಗೆ ಅವಕಾಶ ಕಲ್ಪಿಸಬೇಕು.ಯಾವ ಯೋಜನೆಗೆ ಸಾರ್ವಜನಿಕ ವಿರೋಧವಿದೆಯೋ ಅಂಥ ಯೋಜನೆಯನ್ನು ಸರ್ಕಾರ ಕೈಬಿಡಬೇಕು. ಈಗಾಗಲೇ ನಿವೃತ್ತ ಯೋಧರಿಗೆ ನೀಡುವ ಪಿಂಚಣಿ, ಕೃಷಿ ಭೂಮಿ ವಿತರಣೆಯಲ್ಲಿ ಹಲವು ಸಮಸ್ಯೆಗಳಿವೆ. ಇವನ್ನು ಬಗೆಹರಿಸುವ ಬದಲು ಹೊಸ ಸಮಸ್ಯೆ ಸೃಷ್ಟಿಗೆ ಸರ್ಕಾರ ಮುಂದಾಗಿದೆ. ಈ ಬಗ್ಗೆ ಮರುಪರಿಶೀಲನೆ ಆಗಬೇಕು ಎಂದರು.
ರಾಜ್ಯ ಸರ್ಕಾರದ ಮನೆ ಬಾಗಿಲಿಗೆ ಪಿಂಚಣಿ ಯೋಜನೆ ಅನುಷ್ಠಾನ ಸರಿಯಾಗಿಲ್ಲ. ಪಹಣಿಯಲ್ಲಿ ಬೆಳೆ ನಮೂದು ಸರಿಯಾಗಿ ಆಗುತ್ತಿಲ್ಲ. ಇದರಿಂದ ರೈತರಿಗೆ ಸಾಲ ಪಡೆಯಲು, ಬೆಳೆ ವಿಮೆಗೆ ತೀರಾ ಸಮಸ್ಯೆ ಆಗುತ್ತಿದೆ. ಇದರ ಕುರಿತು ಸರ್ಕಾರ ತಕ್ಷಣ ಸರಿಪಡಿಸಬೇಕು ಎಂದರು.
ಬಿಜೆಪಿ ಜಿಲ್ಲಾ ವಕ್ತಾರರು ಕಾಂಗ್ರೆಸ್ಸಿಗರಿಗೆ ಬೆಂಕಿವೀರರು ಎಂದು ಹೇಳಿರುವುದು ಹಾಸ್ಯಾಸ್ಪದವಾಗಿದೆ. ಶಿರಸಿ ಹಾಗೂ ಕುಮಟಾ ಗಲಭೆ ವೇಳೆ ಯಾರು ಸಾರ್ವಜನಿಕ ಆಸ್ತಿಪಾಸ್ತಿಗೆ ಬೆಂಕಿ ಹಚ್ಚಿದ್ದರು ಎಂಬುದನ್ನು ಬಿಜೆಪಿಗರು ಮತ್ತೆ ನೆನಪಿಸಿಕೊಳ್ಳಬೇಕು ಹೇಳಿದರು.
ನಾನು ಪಕ್ಷದ ಶಿಸ್ತಿನ ಕಾರ್ಯಕರ್ತನಾಗಿದ್ದು, ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ನಾನು ಕೂಡ ಪ್ರಬಲ ಆಕಾಂಕ್ಷಿಯಾಗಿದ್ದೇನೆ.ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಿರಸಿ- ಸಿದ್ದಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಕ್ಷದ ವರಿಷ್ಠರು ಅವಕಾಶ ನೀಡಿದರೆ ಕಣಕ್ಕಿಳಿಯುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಗಣೇಶ ದಾವಣಗೆರೆ, ಬಸವರಾಜ ದೊಡ್ಡನಿ, ಪ್ರದೀಪ ಶೆಟ್ಟಿ ಇದ್ದರು.