ಶಿರಸಿ: ಬನವಾಸಿ ಅಭಿವೃದ್ಧಿಗೆ ಸಂಕಲ್ಪ ಹಾಗೂ ಲೋಕಲ್ಯಾಣಕ್ಕೆ ಪ್ರಾರ್ಥಿಸಿ ಬೇಬಿಮಠ ಮತ್ತು ಚಂದ್ರವನ ಪೀಠಾಧಿಪತಿ ಡಾ. ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ನಾಡಿನ ಪ್ರಸಿದ್ಧ ಬನವಾಸಿ ಮಧುಕೇಶ್ವರ ದೇವರಿಗೆ 108 ಕೆಜಿ ಮಧುವಿನಿಂದ ಅಭಿಷೇಕ ಮಾಡಿದರು.
ನಾಡಿನ ಶಿವತಾಣಗಳಲ್ಲಿ ಅತಿ ಮಹತ್ವದ, ಜೇನುತುಪ್ಪದ ಬಣ್ಣದಲ್ಲಿರುವ ಬನವಾಸಿಯ 5.5ಅಡಿ ಎತ್ತರದ ಶ್ರೀ ಮಧುಕೇಶ್ವರ ಲಿಂಗಕ್ಕೆ ಶತರುದ್ರದ ಮೂಲಕ ಜೇನುತುಪ್ಪದ ಅಭಿಷೇಕ ಮಾಡಲಾಯಿತು. ಮೂರು ತಾಸಿಗೂ ಹೆಚ್ಚು ಕಾಲ ರುದ್ರಾಭಿಷೇಕದಂತೆ ಜೇನುತುಪ್ಪದಿಂದ ಅಭಿಷೇಕ ನಡೆಯಿತು.ಬೆಳಗ್ಗೆ ಸ್ಥಳೀಯ ಬಸವೇಶ್ವರ ದೇವಸ್ಥಾನದಿಂದ ಡಾ.ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಅವರನ್ನು ಮೆರವಣಿಗೆ ಮೂಲಕ ಶ್ರೀ ಮಧುಕೇಶ್ವರ ದೇಗುಲಕ್ಕೆ ಕರೆತರಲಾಯಿತು. ನಂತರ ಸಂಕಲ್ಪಿಸಿದ ಕಾರ್ಯಕ್ರಮ ನೆರವೇರಿಸಲಾಯಿತು. ಅರ್ಚಕ ನಾಗೇಶ ಪತ್ರೆ ಈ ಕಾರ್ಯಕ್ಕೆ ಸಹಕರಿಸಿದರು. ಕೊನೆಯಲ್ಲಿ ಮಹಾಮಂಗಳಾರತಿ ನಡೆಸುವ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು.
ಬೇಬಿಮಠದ ಶ್ರೀಗಳು ಹಿಂದೆ ಪೌರಾಣಿಕ, ಐತಿಹಾಸಿಕ ಹಾಗೂ ಸಾಮಾಜಿಕ ಇತಿಹಾಸವುಳ್ಳ ಶಿಲಾಮಯ ದೇಗುಲ ಬನವಾಸಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಬನವಾಸಿ ಪ್ರಾಧಿಕಾರ ಆಗಬೇಕು ಎಂದು ಸಂಕಲ್ಪ ಮಾಡಿದ್ದರು. ಕ್ಷೇತ್ರ ಅಭಿವೃದ್ಧಿ ಕಾಣಬೇಕು ಎಂದು ಬಯಸಿದ್ದರು.ಆ ಕನಸು ನನಸಾಗಿದ್ದರಿಂದ ಸಂಕಲ್ಪಿಸಿದಂತೆ 108 ಕೆಜಿ ಮಧುವಿನಿಂದ ಅಭಿಷೇಕ ಮಾಡಿದರು. ಅಲ್ಲದೇ ದೇಶದ ಜನ ಕೊವಿಡ್‌ನಿಂದ ಮುಕ್ತಿ ಹೊಂದಬೇಕು, ಅಕಾಲಿಕ ಮಳೆಯಿಂದ ಜಲಪ್ರಳಯದಂತ ಪ್ರಕೃತಿ ವಿಕೋಪಗಳು ಹಾನಿಯಾಗದಿರಲಿ, ದೇಶವನ್ನು ಕಾಯುವ ಯೋಧರಿಗೆ, ರೈತರಿಗೆ ಒಳ್ಳೆಯದಾಗಲೆಂಬ ಉದ್ದೇಶದಿಂದ ಈ ಪವಿತ್ರ ಅಭಿಷೇಕ ಕಾರ್ಯ ನೆರವೇರಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣವರ, ಮಾಜಿ ಶಾಸಕ ವಿ. ಎಸ್. ಪಾಟೀಲ, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಭೀಮಣ್ಣನಾಯ್ಕ, ದಾತ್ರಿ ಫೌಂಡೇಶನ್ ಸಂಸ್ಥಾಪಕ ಶ್ರೀನಿವಾಸ ಭಟ್ಟ, ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ. ಎಫ್. ನಾಯ್ಕ, ಪ್ರಾದೇಶಿಕ ಸಾರಿಗೆ ಅಧಿಕಾರಿ ಷಣ್ಮುಖಪ್ಪ ಹಡಗದ, ಮಧುಕೇಶ್ವರ ದೇವಸ್ಥಾನದ ಅಧ್ಯಕ್ಷ ರಾಜಶೇಖರ ಒಡೆಯರ ಇತರರಿದ್ದರು.