ಶಿರಸಿ : ಇಲ್ಲಿನ ಜನನಿ ಮ್ಯೂಸಿಕ್ ಸಂಸ್ಥೆ(ರಿ) ಮತ್ತು ಹಾಡುವ ಗೂಡು ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಶಿರಸಿಯ ರೋಟರಿ ಸೆಂಟರ್ ನಲ್ಲಿ “ಕರೋಕೆ ಸಂಗಮ” ಎಂಬ ಕರೋಕೆ ಸಂಗೀತ ತರಬೇತಿ ಕ್ಲಾಸ್‌ನ್ನು ಪ್ರಾರಂಭಿಸಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೋಟರಿ ಕ್ಲಬ್‌ನ ಅಧ್ಯಕ್ಷ ರೋ॥ಪಾಂಡುರಂಗ ಪೈ ಮಾತನಾಡಿ, ಇಂತಹದೊಂದು ಕ್ಲಾಸ್ ರೋಟರಿ ಸೆಂಟರ್‌ನಲ್ಲಿ ಪ್ರಾರಂಭವಾಗುತ್ತಿರುವುದು ಅತ್ಯಂತ ಸಂತಸದ ವಿಷಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು ಮತ್ತು ಶ್ರೀಮತಿ ರೇಖಾ ದಿನೇಶ ಈ ತರಗತಿಯನ್ನು ನಡೆಸಿಕೊಡಲು ಒಪ್ಪಿಕೊಂಡಿರುವುದು ಅತ್ಯಂತ ಸಂತಸದ ವಿಷಯವಾಗಿದೆ. ಇವರ ಅಡಿಯಲ್ಲಿ ತರಬೇತಿಯನ್ನು ಪಡೆದ ವಿದ್ಯಾರ್ಥಿಗಳು ಜಿಲ್ಲಾ ಮತ್ತು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವಂತಾಗಲಿ ಎಂದು ತರಗತಿಗೆ ಶುಭ ಹಾರೈಸಿದರು.
ಮತ್ತೋರ್ವ ಅತಿಥಿಗಳಾಗಿ ಆಗಮಿಸಿದ್ದ ರೋಟರಿ ಕ್ಲಬ್‌ನ ಕಾರ್ಯದರ್ಶಿ ರೋ॥ ಶ್ರೀನಿವಾಸ ನಾಯ್ಕ ಮಾತನಾಡಿ ಶ್ರೀಮತಿ ರೇಖಾ ದಿನೇಶ ನಮ್ಮ ಶಿರಸಿ ಭಾಗದ ಹೆಮ್ಮೆ. ಅವರು ಹಲವಾರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ನಮ್ಮ ಜಿಲ್ಲೆಗೆ ಹೆಸರನ್ನು ತಂದಿದ್ದು,ರೋಟರಿ ಸೆಂಟರ್ ನಲ್ಲಿ ಕರೋಕೆ ತರಬೇತಿ ಕ್ಲಾಸನ್ನು ಪ್ರಾರಂಭ ಮಾಡುತ್ತಿರುವುದು ಕರೋಕೆ ಸಂಗೀತವನ್ನು ಕಲಿಯಲು ಆಸಕ್ತಿ ಉಳ್ಳ ಪ್ರತಿಯೊಬ್ಬರಿಗೂ ಬಹಳ ಸಹಾಯಕವಾಗಿದೆ ಎಂದು ಹೇಳಿದರು.
ಶ್ರೀಮತಿ ರೇಖಾ ದಿನೇಶರವರೊಂದಿಗೆ ಶಾಸ್ತ್ರೀಯ ಸಂಗೀತದ ಅಡಿಪಾಯದಿಂದ ಪ್ರಬುದ್ಧರಾಗಿರುವ ಇಂಥ ಕಲಾವಿದರಿಂದ ಈ ಕರೋಕೆ ತರಬೇತಿ ನಡೆಯುತ್ತಿರುವುದರಿಂದ ಸಿನಿಮಾ ಸಂಗೀತದಲ್ಲಿನ ಶ್ರುತಿ ತಾಳಗಳ ತಿಳುವಳಿಕೆಯನ್ನ ಕಲಿಯುವ ಆಸಕ್ತರಿಗೆ ಪಡೆಯಲು ತುಂಬಾ ಅನುಕೂಲಕರವಾಗಿರುತ್ತದೆ ಎಂದು ಅಭಿಪ್ರಾಯವನ್ನು ನೀಡಿ ಕ್ಲಾಸಿಗೆ ಮತ್ತು ಮುಂದೆ ಕ್ಲಾಸ್ ಪ್ರಾರಂಭದ ಪ್ರಯುಕ್ತ ನಡೆಯುವ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ತದನಂತರ ನಡೆದ ಕಾರ್ಯಕ್ರಮದಲ್ಲಿ ರೋ॥ ಶ್ರೀ ಗಣೇಶ ಕೂರ್ಸೆ ಅವರು ನೀನಿರಲು ಜೊತೆಯಲ್ಲಿ ಎಂಬ ಸುಮಧುರ ಗೀತೆಯನ್ನು ಅತ್ಯಂತ ಸುಶ್ರಾವ್ಯವಾಗಿ ಪ್ರಾರಂಭಿಕವಾಗಿ ಪ್ರಸ್ತುತ ಪಡಿಸಿದರು.
ನಂತರ ಮಧುಶ್ರೀ ಶೇಟ್ ಇವರು ಕಂಡೆನಾ ಕಂಡೆನಾ ಎಂಬ ಕನ್ನಡ ಗೀತೆ,ಭೂಮಿ ದಿನೇಶ್ ಅವರು ಇಕ್ ರಾಧಾ ಇಕ್ ಮೀರಾ ಎಂಬ ಹಿಂದಿ ಗೀತೆ, ಲಯನ್ಸ್ ಮಾಜಿ ಅಧ್ಯಕ್ಷ ಪ್ರಭಾಕರ್ ಹೆಗಡೆ ಮಂಗಳದ ಈ ಸುದಿನ ಎಂಬ ಸುಪ್ರಸಿದ್ಧ ಕನ್ನಡ ಗೀತೆ, ಸಂತೋಷ್ ಶೇಟ್ ಮಿಂಚಾಗಿ ನೀನು ಬರಲು ಎಂಬ ಕನ್ನಡ ಗೀತೆ, ರೋ॥ ರಾಘವೇಂದ್ರ ಸಕಲಾತಿ ಇವರು ಸುಪ್ರಸಿದ್ಧ ಹಿಂದಿ ಗೀತೆ ಕುಚ್ ನಾ ಕಹೋ, ಹಾಗೂ ರೋ॥ ವಿನಾಯಕ ಶೇಟ್ ನಮ್ಮೂರ ಮಂದಾರ ಹೂವೆ ಎಂಬ ಕನ್ನಡ ಚಿತ್ರಗೀತೆಯನ್ನು, ರೋ॥ ಪ್ರವೀಣ್ ಕಾಮತ್ ಅವರು ದಿಯೆ ಜಲ್ತೆ ಹೈ ಎಂಬ ಪ್ರಸಿದ್ಧ ಹಿಂದಿ ಗೀತೆ ಮತ್ತು ಗಣೇಶ ಕೂರ್ಸೆಯವರೊಂದಿಗೆ ಜೊತೆಗೂಡಿ ನಾವಾಡುವ ನುಡಿಯೇ ಕನ್ನಡ ನುಡಿ ಎಂಬ ಸುಪ್ರಸಿದ್ಧ ಕನ್ನಡ ಗೀತೆಯನ್ನು ಪ್ರಸ್ತುತಪಡಿಸಿದರು. ಪ್ರಾಚಾರ್ಯೆ ಶ್ರೀಮತಿ ರೇಖಾ ದಿನೇಶ ರವರು ಡಾ॥ರಾಜಕುಮಾರ ವರ ಕವಿರತ್ನ ಕಾಳಿದಾಸ ಚಿತ್ರದ ಹಾಡು ಸದಾಕಣ್ಣಲಿ ಎಂಬ ಪ್ರಚಲಿತಗೀತೆಯನ್ನು ಅತ್ಯಂತ ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಗಣೇಶ ಕೂರ್ಸೆ ಅವರು ಸ್ವಾಗತಿಸಿದರು. ಕೊನೆಯಲ್ಲಿ ಜನನಿ ಮ್ಯೂಸಿಕ್ ಸಂಸ್ಥೆಯ ಕಾರ್ಯದರ್ಶಿಗಳಾದ ದಿನೇಶ್ ಹೆಗಡೆಯವರು ವಂದಿಸಿದರು.
ಪ್ರತಿ ಭಾನುವಾರ ಸಂಜೆ ನಾಲ್ಕರಿಂದ ರೋಟರಿ ಸೆಂಟರ್ ನಲ್ಲಿ ಕರೋಕೆ ಸಂಗೀತ ಕ್ಲಾಸ್ ನಡೆಯುವುದು ಹಾಗೂ ಆಸಕ್ತರು ಇದರ ಪ್ರಯೋಜನ ಪಡೆಯಬೇಕೆಂದು ರೊಟೇರಿಯನ್ ಅಧ್ಯಕ್ಷ ರೋ॥ ಪಾಂಡುರಂಗ ಪೈ ಅವರು ಕರೆ ನೀಡಿದರು.
ಶಿರಸಿಯಲ್ಲಿ ವಿನೂತನ “ಕರೋಕೆ ಸಂಗಮ”
