• first
  second
  third
  previous arrow
  next arrow
 • ಗ್ರಾ.ಪಂ ಮಟ್ಟದ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ: ಶಿವರಾಮ್ ಹೆಬ್ಬಾರ್

  300x250 AD

  ಯಲ್ಲಾಪುರ: ಗ್ರಾಮಾಂತರ ಪ್ರದೇಶದ ಅಭಿವೃದ್ಧಿಯ ಪರಿಕಲ್ಪನೆ ಇಟ್ಟುಕೊಂಡು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಅತಿ ಶೀಘ್ರದಲ್ಲಿ ಗ್ರಾ.ಪಂ ಮಟ್ಟದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.

  ಅವರು ಶನಿವಾರ ಎಪಿಎಂಸಿ ಅಡಿಕೆ ಭವನದಲ್ಲಿ ನೂತನ ಚುನಾಯಿತ ಗ್ರಾಮಪ್ರತಿನಿಧಿಗಳ ಒಕ್ಕೂಟವನ್ನು ಉದ್ಘಾಟಿಸಿ ಮಾತನಾಡಿ, ಮನೆ ಕಟ್ಟಲು ಎನ್‌ಓಸಿ ನೀಡುವ ಸಂಪೂರ್ಣ ಅಧಿಕಾರ ಗ್ರಾ.ಪಂ.ಗೆ ನೀಡುವ ಅಧಿಕಾರದ ಬಗ್ಗೆ ಸಚಿವ ಸಂಪುಟದ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಸರ್ಕಾರ ಕೂಡ ಪಂಚಾಯತದ ಕೆಲಸಗಳಲ್ಲಿ ಭಾಗಿಯಾಗಲಿದೆ. ಸರ್ಕಾರ ಬಹಳಷ್ಟು ದೊಡ್ಡ ಪ್ರಮಾಣದಲ್ಲಿ ಗ್ರಾ.ಪಂ.ಗಳಿಗೆ ಹಣ ನೀಡುತ್ತಿದೆ ಎಂದು ಹೇಳಿದರು.

  ಒಂಬತ್ತು ಬಾರಿ ಗ್ರಾ.ಪಂ.ಗೆ ಆಯ್ಕೆಯಾಗಿ ಒಕ್ಕೂಟದಿಂದ ಸನ್ಮಾನಿತರಾದ ಇಡಗುಂದಿಯ ಶ್ರೀಕಾಂತ ಶೆಟ್ಟಿ ಮಾತನಾಡಿ, ಹಿಂದೆ ಪಂಚಾಯತಕ್ಕೆ ಕಟ್ಟಡ ಇರಲಿಲ್ಲ. ಆಗ ಪಂಚಾಯತ ಉತ್ಪನ್ನ 1,800 ರೂ. ಇತ್ತು. ಕಾಲುಸಂಕ, ಬೇಲಿ ಕಟ್ಟುವ ಕೆಲಸ ಮಾತ್ರ ಪಂಚಾಯತದಲ್ಲಿ ನಡೆಯುತ್ತಿತ್ತು. ಆದರೆ ಆಗ ಸದಸ್ಯರಿಗೆ ಗೌರವ ಸಿಗುತ್ತಿತ್ತು. ಇಂದು ಮಾಲ್ಕಿಯಲ್ಲಿ ಮನೆ ಕಟ್ಟಬೇಕಾದರೂ ಅದಕ್ಕೆ ಪರವಾನಗಿ ಕೊಡುವ ಅಧಿಕಾರ ಚುನಾಯಿತ ಸದಸ್ಯರಿಗೆ ಇಲ್ಲ. ತೆರಿಗೆ ಪಂಚಾಯತಕ್ಕೆ ಸೇರುತ್ತಿಲ್ಲ. ಸರ್ಕಾರದ ಕೆಲವು ನಿಯಮಗಳು ಬದಲಾಗಬೇಕಿದೆ. ಜನವಸತಿ ಪ್ರದೇಶ ಹಾಗೂ ಜನವಸತಿ ರಹಿತ ಪ್ರದೇಶಗಳಲ್ಲಿ ಒಂದೇ ದೃಷ್ಟಿಯಿಂದ ಯೋಜನೆ ರೂಪಿಸಬಾರದು. ನಮ್ಮ ಜಿಲ್ಲೆ ಗುಡ್ಡಗಾಡು ಪ್ರದೇಶವಾದರಿಂದ ಈ ಭಾಗಕ್ಕೆ ವಿಶೇಷವಾಗಿ ಕೆಲವು ನಿಯಮಗಳಿಂದ ವಿನಾಯತಿ ನೀಡಬೇಕೆಂದು ಅವರು ಹೇಳಿದರು.

  300x250 AD

  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಎಂ.ಕೆ.ಭಟ್ಟ ಯಡಳ್ಳಿ ಮಾತನಾಡಿದರು. ಒಕ್ಕೂಟದ ರಾಜ್ಯ ಪ್ರತಿನಿಧಿ ಸುಬ್ಬಣ್ಣ ಕುಂಟೇಗಾಳಿ ಮನವಿ ಪತ್ರ ವಾಚಿಸಿದರು. ಆರ್.ಎಸ್.ಭಟ್ಟ ಸ್ವಾಗತಿಸಿದರು. ಗಣೇಶ ಹೆಗಡೆ ಕುಂದರ್ಗಿ ಪ್ರಾಸ್ತಾವಿಕ ಮಾತನಾಡಿದರು. ಚುನಾಯಿತ ಗ್ರಾ.ಪಂ ಪ್ರತಿನಿಧಿಗಳ ಮಹಾ ಒಕ್ಕೂಟದ ರಾಜ್ಯ ಅಧ್ಯಕ್ಷ ಸತೀಶ ಕಾಡಶೆಟ್ಟಿಹಳ್ಳಿ, ವಾಕರಾರಸಾ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ, ವಿಕೇಂದ್ರೀಕರಣ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಪ್ರಮೋದ ಹೆಗಡೆ, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಜಗದೀಶ ಕಮ್ಮಾರ್, ಒಕ್ಕೂಟದ ಕಾರ್ಯದರ್ಶಿ ಸದಾಶಿವ ಚಿಕ್ಕೋತಿ, ಉಪಾಧ್ಯಕ್ಷ ಗಜಾನನ ಭಟ್ಟ, ಖಜಾಂಚಿ ಸತೀಶ ನಾಯ್ಕ, ಕೆ.ಟಿ.ಭಟ್ಟ ವೇದಿಕೆಯಲ್ಲಿದ್ದರು.

  Share This
  300x250 AD
  300x250 AD
  300x250 AD
  Back to top