ಕಾರವಾರ:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಅಮೃತಭಾರತಿಗೆ ಕನ್ನಡದಾರತಿ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜ್ಯೋತಿ ಬೆಳಗಿಸಿ, ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಭಾರತ ಇಂದು ಬಲಿಷ್ಠವಾಗಿ, ಶಕ್ತಿಶಾಲಿಯಾಗಿ, ಸಮೃದ್ಧವಾಗಿ, ಸ್ವಾಭಿಮಾನಿ ರಾಷ್ಟ್ರವಾಗಿ ನಿರ್ಮಾಣವಾಗುತ್ತಿದೆ. ಪ್ರಸ್ತುತವಾಗಿ ದೇಶದಲ್ಲಿ ಆಗುತ್ತಿರುವಂತಹ ಬದಲಾವಣೆ ಹಾಗೂ ಅಭಿವೃದ್ಧಿ ಕಾರ್ಯಗಳಿಂದ ಇಡೀ ಪ್ರಪಂಚವೇ ಭಾರತದೆಡೆಗೆ ಗಮನ ಹರಿಸುವಂತಾಗಿದೆ ಎಂದುಹೇಳಿದರು.
ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದಂತಹ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಇಂದಿನ ಎಳೆಯ ಮಕ್ಕಳಿಗೆ ಹಾಗೂ ಯುವಜನತೆಗೆ 75 ವರ್ಷಗಳ ಹಿಂದೆ ನಡೆದ ಸ್ವಾತಂತ್ರ್ಯ ಹೋರಾಟದ ಪರಿಕಲ್ಪನೆಗಳು ಹಾಗೂ ಧ್ಯೇಯಗಳ ಬಗ್ಗೆ ಕಾರ್ಯಕ್ರಮದ ಮೂಲಕ ಅರಿವು ಮೂಡಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರ ಶಾಸಕಿ ರೂಪಾಲಿ ನಾಯ್ಕ್ ಮಾತನಾಡಿ ನಮ್ಮ ದೇಶಕ್ಕೆ ನಾವೂ ನೀಡುವ ಕೊಡುಗೆ ಕೇವಲ ಕಾಲ್ಪನಿಕಕ್ಕೆ ಸೀಮಿತವಾಗದೆ, ಅದು ನಾವು ಮಾಡುವ ಒಂದು ಅತ್ಯುನ್ನತ ಸೇವೆಯಾಗಬೇಕು. ಹಾಗೆಯೇ ಸ್ವಾತಂತ್ರ್ಯ ಹೋರಾಟಗಾರರು ಹಾಕಿಕೊಟ್ಟ ಪಥದಲ್ಲಿ ನಾವೆಲ್ಲ ಸಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಲಾಫಲಕ ಅನಾವರಣ, ಸಸಿ ನೆಡುವುದು, ಸ್ವಾತಂತ್ರ್ಯ ಹೋರಾಟದ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಸಂಕಲ್ಪ ವಿಧಿ ಸ್ವೀಕರಿಸಲಾಯಿತು. ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ ಬೊಮ್ಮಯ್ಯ ಪೊಕ್ಕ ನಾಯ್ಕ್ ಮಕ್ಕಳಾದ ಬಿರಣ್ಣ ನಾಯ್ಕ ಮತ್ತು ವೆಂಕಣ್ಣ ನಾಯ್ಕ್ ಹಾಗೂ ಪ್ರಕಾಶ ನಾಯ್ಕ್ ರವರ ಕುಟುಂಬದವರಾದ ವಿಠೋಬ ನಾಯ್ಕ್ ಅವರಿಗೆ ಸನ್ಮಾನಿಸಲಾಯಿತು. ಹಾಗೂ ಸ್ವಾತಂತ್ರ್ಯ ಹೋರಾಟದ ಪರಿಕಲ್ಪನೆ ಕುರಿತು ಹರ್ಷ ನಾರಾಯಣ ಭಟ್ ಉಪನ್ಯಾಸ ನೀಡಿದರು.
ಜಿಲ್ಲಾಧಿಕಾರಿಗಳ ಕಾರ್ಯಲಯದಿಂದ ಜಿಲ್ಲಾ ರಂಗಮಂದಿರದವರೆಗೆ ಭಾರತ ಮಾತೆಯ ಭಾವಚಿತ್ರ ಹಾಗೂ ವಿವಿಧ ಸಾಂಸ್ಕೃತಿಕ ಕಲಾ ತಂಡಗಳಿಂದ ಮೆರವಣಿಗೆ ಹೊರಡಿಸಲಾಯಿತು. ಕಾರ್ಯಕ್ರಮದ ನಂತರ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ., ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ನರೇಂದ್ರ ನಾಯಕ, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಉಪಾಧ್ಯಕ್ಷ ಪ್ರಕಾಶ ನಾಯ್ಕ, ಮಾಜಿ ಶಾಸಕ ಗಂಗಾಧರ ಭಟ್, ಗ್ರಾಮ ಪಂಚಾಯತಿ ಅಧ್ಯಕ್ಷರು, ಸಿಬ್ಬಂದಿ ಹಾಗೂ ಇನ್ನಿತರರು ಇದ್ದರು.