ಕಾರವಾರ: ನಗರದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವೃತ್ತಿಪರ ವಿದ್ಯಾರ್ಥಿ ನಿಲಯಕ್ಕೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕಿ ರೂಪಾಲಿ ಎಸ್.ನಾಯ್ಕ ಭೇಟಿ ನೀಡಿ ಪರಿಶೀಲಿಸಿದರು.
ವಸತಿ ನಿಲಯದ ಅಡುಗೆ ಸಾಮಗ್ರಿ ಸಂಗ್ರಹಣಾ ಕೊಠಡಿ, ಲ್ಯಾಬ್, ವಿದ್ಯಾರ್ಥಿಗಳ ಕೊಠಡಿ ವೀಕ್ಷಿಸಿ, ಮಾಹಿತಿ ಪಡೆದರು. ವಸತಿ ನಿಲಯದ ಅಡುಗೆ ಕೋಣೆ ವೀಕ್ಷಿಸಿ, ವಿದ್ಯಾರ್ಥಿಗಳಿಗೆ ನೀಡುವ ಆಹಾರದ ಕುರಿತು ಮಾಹಿತಿ ಪಡೆದರು. ಜತೆಗೆ ಊಟ ಮಾಡಿ ಗುಣಮಟ್ಟ ಪರಿಶೀಲಿಸಿದರು. ವಸತಿ ನಿಲಯದ ಒಳಗಡೆ ಹಾಗೂ ಆವರಣದಲ್ಲಿ ಸ್ವಚ್ಛತೆ ಬಗ್ಗೆಯೂ ಉಸ್ತುವಾರಿ ಸಚಿವರು ಪರಿಶೀಲನೆ ನಡೆಸಿದರು.