ಕಾರವಾರ: ಜಿಲ್ಲಾ ಪಂಚಾಯತ ಹಾಗೂ ತಾಲೂಕು ಪಂಚಾಯತ ಚುನಾವಣೆ ಶೀಘ್ರದಲ್ಲೇ ನಡೆಯಲಿದೆ ಎನ್ನಲಾಗಿದ್ದು ಓಬಿಸಿ ಮೀಸಲಾತಿ ಇಲ್ಲದೇ ಯಾವುದೇ ಕಾರಣಕ್ಕೂ ಚುನಾವಣೆಯನ್ನು ನಡೆಸುವುದಿಲ್ಲ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ.
2021ರ ಏಪ್ರಿಲ್ ತಿಂಗಳ ವೇಳೆಗೆ ಜಿಲ್ಲಾ ಪಂಚಾಯತ ಸದಸ್ಯರ ಅಧಿಕಾರದ ಅವಧಿ ಮುಕ್ತಾಯವಾಗಿತ್ತು. ಅದಕ್ಕೂ ಮುನ್ನವೇ ಕ್ಷೇತ್ರಗಳ ಮೀಸಲಾತಿ ಘೋಷಣೆ ಮಾಡಿದ್ದರೂ, ನಂತರ ಮೀಸಲಾತಿಯ ಗೊಂದಲದಿಂದ ಚುನಾವಣೆ ಮಾತ್ರ ನಡೆಯದೇ ಪ್ರತಿ ಜಿಲ್ಲಾ ಪಂಚಾಯತ್‌ಗೆ ಆಡಳಿತಾಧಿಕಾರಿಗಳನ್ನ ನೇಮಿಸಿ ಸರ್ಕಾರ ಆಡಳಿತ ನಡೆಸುವ ಕಾರ್ಯಕ್ಕೆ ಮುಂದಾಗಿತ್ತು.
ಜಿಲ್ಲಾ ಪಂಚಾಯತ ಹಾಗೂ ತಾಲೂಕು ಪಂಚಾಯತಗಳ ಕ್ಷೇತ್ರಗಳಿಗೆ ನ್ಯಾಯಾಲಯ ಕೇವಲ ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನ ಮಾತ್ರ ನಿಗದಿ ಮಾಡಿದ್ದು, ಓಬಿಸಿಗಳಿಗೆ ಮೀಸಲಾತಿ ನಿಗದಿ ಮಾಡದೇ ಚುನಾವಣೆ ಎದುರಿಸುವಂತೆ ಸೂಚಿಸಿದ ಹಿನ್ನಲೆಯಲ್ಲಿ ಸರ್ಕಾರ ಗೊಂದಲಕ್ಕೆ ಸಿಲುಕಿದ್ದು ಮೀಸಲಾತಿಯನ್ನ ಬಿಟ್ಟು ಚುನಾವಣೆಗೆ ಮುಂದಾದರೆ ದೊಡ್ಡ ಹೊಡೆತ ಬೀಳಲಿದೆ ಎಂದು ಚುನಾವಣೆ ನಡೆಸುವ ಕಾರ್ಯಕ್ಕೆ ಮುಂದಾಗಿರಲಿಲ್ಲ.
ಸದ್ಯ ಸುಪ್ರೀಂ ಕೋರ್ಟ್ ಗೆ ಓಬಿಸಿ ಮೀಸಲಾತಿಯ ಬಗ್ಗೆ ಸ್ಪಷ್ಟಪಡಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿದ್ದು ಓಬಿಸಿ ಮೀಸಲಾತಿಯನ್ನ ಬಿಟ್ಟು ಯಾವುದೇ ಕಾರಣಕ್ಕೂ ಚುನಾವಣೆ ನಡೆಸುವುದಿಲ್ಲ ಎಂದು ಕೋಟಾ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದ್ದಾರೆ. ಎರಡು ತಿಂಗಳಲ್ಲಿ ಚುನಾವಣೆ ಘೋಷಣೆ ಮಾಡುವ ಸಾಧ್ಯತೆ ಇದ್ದು ಒಂದೊಮ್ಮೆ ಮೀಸಲಾತಿಯನ್ನ ಬಿಟ್ಟು ಚುನಾವಣೆ ಮಾಡಿದರೆ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗಲಿದೆ. ಈ ನಿಟ್ಟಿನಲ್ಲಿ ಎಸ್‌ಸಿ, ಎಸ್‌ಟಿ ಜೊತೆ ಹಿಂದುಳಿದ ವರ್ಗಗಳಿಗೂ ಮೀಸಲಾತಿ ನೀಡಿ ಸುಪ್ರೀಂ ಕೋರ್ಟ್ ಗೆ ಮನವರಿಕೆ ಮಾಡಿ ಚುನಾವಣೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
39ರಿಂದ 54ಕ್ಕೆ ಏರಿದ ಜಿಲ್ಲಾ ಪಂಚಾಯತ ಕ್ಷೇತ್ರ: ಜಿಲ್ಲೆಯಲ್ಲಿ ಈ ಹಿಂದೆ ಜಿಲ್ಲಾ ಪಂಚಾಯತ ಕ್ಷೇತ್ರಗಳು 39 ಇದ್ದು ಕಳೆದ ಬಾರಿ 39 ಕ್ಷೇತ್ರಗಳಿಗೆ ಮೀಸಲಾತಿಯನ್ನ ನಿಗದಿ ಮಾಡಲಾಗಿತ್ತು. ಸರ್ಕಾರ ಕ್ಷೇತ್ರ ಮರು ವಿಂಗಡಣೆ ಮಾಡುವಂತೆ ತಿಳಿಸಿದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ 15 ಹೆಚ್ಚುವರಿ ಕ್ಷೇತ್ರಗಳನ್ನ ಮಾಡಲಾಗಿದೆ ಎನ್ನಲಾಗಿದೆ.
ಜಿಲ್ಲಾ ಪಂಚಾಯತ ಕ್ಷೇತ್ರಗಳು 39 ರಿಂದ 54ಕ್ಕೆ ಏರಿದ್ದು ಬಹುತೇಕ ಎಲ್ಲಾ ತಾಲೂಕುಗಳಲ್ಲೂ ಒಂದೆರಡು ಹೆಚ್ಚುವರಿ ಕ್ಷೇತ್ರಗಳನ್ನ ವಿಂಗಡಣೆ ಮಾಡಲಾಗಿದೆ ಎನ್ನಲಾಗಿದ್ದು ಚುನಾವಣಾ ಆಯೋಗ ಮೀಸಲಾತಿಯನ್ನ ನಿಗದಿ ಮಾಡಲಿದೆ.
ಇನ್ನು ತಾಲೂಕಾ ಪಂಚಾಯತ ಕ್ಷೇತ್ರಗಳ ಪೈಕಿ ಜಿಲ್ಲೆಯಲ್ಲಿ ಒಟ್ಟು 9 ಕ್ಷೇತ್ರಗಳು ಕಡಿಮೆಯಾಗಿದೆ. ಈಗಾಗಲೇ ಜಿಲ್ಲಾಡಳಿತ ಕ್ಷೇತ್ರ ಮರು ವಿಂಗಡಣೆ ಮಾಡಿದ್ದು ಮೀಸಲಾತಿ ನಿಗದಿಗಾಗಿ ಕಾಯುತ್ತಿದೆ.
ಚುನಾವಣೆಗೆ ಸಿದ್ಧರಾಗುತ್ತಿರುವ ರಾಜಕೀಯ ಪಕ್ಷಗಳು:ರಾಜ್ಯದಲ್ಲಿ ಜಿಲ್ಲಾ ಹಾಗೂ ತಾಲೂಕ ಪಂಚಾಯತ ಕ್ಷೇತ್ರಗಳಿಗೆ ಸರ್ಕಾರ ಚುನಾವಣೆ ಮಾಡಲು ಸಿದ್ದತೆ ಮಾಡುತ್ತಲೇ ರಾಜಕೀಯ ಪಕ್ಷಗಳು ಅಲರ್ಟ್ ಆಗಿದೆ.
ಎರಡು ತಿಂಗಳಲ್ಲಿ ಚುನಾವಣೆ ಘೋಷಣೆ ಸಾಧ್ಯತೆ ಇದೆ ಎನ್ನಲಾಗಿದ್ದು ಈ ಬಾರಿಯ ಜಿಲ್ಲಾ ಹಾಗೂ ತಾಲೂಕ ಪಂಚಾಯತ ಚುನಾವಣೆ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಆಗಲಿದ್ದು ಶತಾಯ ಗತಾಯ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಈಗಾಗಲೇ ಪ್ರಮುಖ ರಾಜಕೀಯ ಪಕ್ಷವಾದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸಿದ್ದತೆ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ.