ಭಟ್ಕಳ:ಡಾ.ಶ್ಯಾಮ್ ಪ್ರಸಾದರಂತಹ ಹಿರಿಯರ ಮಾರ್ಗದರ್ಶನದಿಂದ ಬಿಜೆಪಿಯಲ್ಲಿ ಕಾರ್ಯಕರ್ತರ ಬಹು ದೊಡ್ಡ ಪಡೆ ಸಿದ್ಧವಾಗಿದೆ. ಕೇವಲ 2 ಶಾಸಕರು ಹಾಗೂ 2 ಸಚಿವರಿದ್ದ ಬಿಜೆಪಿ ಪಕ್ಷದದಲ್ಲಿ ಈಗ 319 ಶಾಸಕ ಬಲ ಹೊಂದಿರುವುದು ಸಂಘಟನೆಯ ಪರ್ವವಾಗಿದೆ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.
ಡಾ.ಶ್ಯಾಮ್ ಪ್ರಸಾದ ಮುಖರ್ಜಿಯವರ ಬಲಿದಾನದ ಅಂಗವಾಗಿ ಮುಟ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬೂತ್ ಮಟ್ಟದಿಂದ ಪುಷ್ಪ ನಮನ ಹಾಗೂ ಗಿಡ ನೆಡುವ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಭಾರತೀಯ ಜನತಾ ಪಾರ್ಟಿ ಹಿಂದುತ್ವದ ಅಡಿಯಲ್ಲಿ ಬರುವ ಶಿಸ್ತಿನ ಪಕ್ಷವಾಗಿದೆ. ಇದನ್ನು ಮುನ್ನಡೆಸಿ ಭದ್ರ ಬುನಾದಿ ಹಾಕಿಕೊಟ್ಟಿರುವ ನಾಯಕರು ಇವರುಗಳಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಾವೆಲ್ಲರೂ ಜೂನ್ 23ರಿಂದ ಜುಲೈ 6ರ ಅವರ ಹುಟ್ಟುಹಬ್ಬದ ತನಕ ಪರಿಸರವನ್ನು ಸಂರಕ್ಷಣೆ ಮಾಡಬೇಕು. ನಮ್ಮಲ್ಲಿ ಶೇ 60ರಷ್ಟು ಕೃಷಿ ಭೂಮಿ ಇದ್ದರು ಅದು ಯೋಗ್ಯವಲ್ಲ ಎಂಬ ಕಾರಣ ಒಂದು ರೀತಿಯಲ್ಲಿ ಪರಿಸರ ಮೇಲಿನ ನಿಷ್ಕಾಳಜಿಯಾಗಿದೆ. ಇದಕ್ಕಾಗಿ ಪರಿಸರ ಸಂರಕ್ಷಣೆ ಮಾಡುವ ಉದ್ದೇಶದಿಂದ ಭಾರತೀಯ ಜನತಾ ಪಾರ್ಟಿ ಎಲ್ಲಾ ಭಾಗದಲ್ಲಿ ಗಿಡ ನೆಡುವ ಕಾರ್ಯ ಹಾಗೂ ಸ್ವಚ್ಛತಾ ಕಾರ್ಯಕ್ರಮ ನಡೆಸುತ್ತಿದ್ದೇವೆ. ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿಯು ಮುರುಡೇಶ್ವರ ಹಿಂದೂ ಭೂಮಿ ಸ್ವಚ್ಛತೆ ಮಾಡಿದ್ದೇವೆ. ಇಡೀ ದೇಶದಲ್ಲೇ ಸ್ವಚ್ಛ ಭಾರತ ಮಿಷನ್ ಎಂಬ ಕಾರ್ಯಕ್ರಮ ಮಾಡಿ ದೇಶವನ್ನು ಸ್ವಚ್ಛತೆಯ ಕಾಳಜಿ ಮೂಡಿಸಿದ ಏಕೈಕ ಪ್ರಧಾನಿ ಎಂದರೆ ಅದು ನಮ್ಮ ಪ್ರಧಾನಿ ನರೇಂದ್ರ ಮೋದಿ ಎಂಬುದು ಹೆಮ್ಮೆಯಿಂದ ಹೇಳುತ್ತೇನೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಸುಬ್ರಾಯ ದೇವಾಡಿಗ ಮಾತನಾಡಿ, ಜೂನ್ 24ರಂದು ಡಾ.ಶ್ಯಾಮ್ ಪ್ರಸಾದ ಮುಖರ್ಜಿಯವರ ಬಲಿದಾನ ದಿನ. ಜುಲೈ 6ರಂದು ಡಾ.ಶ್ಯಾಮ್ ಪ್ರಸಾದ ಮುಖರ್ಜಿಯವರ ಜನ್ಮದಿನ. ಜೂನ್ 23ರಿಂದ ಜುಲೈ 6ರ ತನಕ ಸೇವೆ ಮತ್ತು ಸುಶಾಸನದ ಅಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಅದರಲ್ಲೂ ಮುಖ್ಯವಾಗಿ ಪರಿಸರ ಸಂರಕ್ಷಣೆಯಾಗಿದೆ. ಮಾಹಿತಿ ಪ್ರಕಾರ ದೇಶದಲ್ಲಿ 60% ಭೂಮಿ ಕೃಷಿಗೆ ಯೋಗ್ಯವಲ್ಲ ಎಂಬ ವರದಿ ಇದೆ. ಹಾಗಾಗಿ ಊರಿನಲ್ಲಿ ಮಳೆ ಬೆಳೆ ಹೆಚ್ಚಾಗಬೇಕೆಂದರೆ ಪರಿಸರ ಕಾಪಾಡುವುದು ನಮ್ಮೆಲ್ಲರ ಕರ್ತ್ಯವವಾಗಿದೆ. ಹೆಚ್ಚು ಹೆಚ್ಚು ಗಿಡ ನೆಡುವುದರ ಮೂಲಕ ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದ ಅವರು. ಕೇವಲ ಚುನಾವಣೆ ವೇಳೆಯಲ್ಲಿ ಮಾತ್ರ ಕೆಲಸ ಮಾಡದೇ ಇಂತಹ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ನಂತರ ಮುಟ್ಟಳ್ಳಿ ಶಾಲಾ ಆವರಣದಲ್ಲಿ ಶಾಸಕ ಸುನೀಲ ನಾಯ್ಕ ಹಾಗೂ ಬಿಜೆಪಿ ಮುಖಂಡರು ಗಿಡಗಳನ್ನು ನೆಟ್ಟರು. ಪಕ್ಷದಿಂದ ಡಾ.ಶ್ಯಾಮ್ ಪ್ರಸಾದ ಮುಖರ್ಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋವಿಂದ ನಾಯ್ಕ, ಮಂಡಲ ಪ್ರಧಾನ ಕಾರ್ಯದರ್ಶಿ ಮೋಹನ ನಾಯ್ಕ, ಕಾರ್ಯಕ್ರಮ ಸಂಚಾಲಕ ಹಾಗೂ ಮಂಡಲ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ ನಾಯ್ಕ, ಮುಟ್ಟಳ್ಳಿ ಗ್ರಾ.ಪಂ ಅಧ್ಯಕ್ಷ ಶೇಷು ನಾಯ್ಕ, ಪಂಚಾಯತ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.