ಹೊನ್ನಾವರ: ಅರೇಅಂಗಡಿಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀಕರಿಕಾನ ಪರಮೇಶ್ವರಿ ದೇವಾಲಯದ ಶಿಲಾ ಮಹಾದ್ವಾರ ಲೋಕಾರ್ಪಣೆ ಜೂನ್ 27ಕ್ಕೆ ನಡೆಯಲಿದೆ ಎಂದು ಸಂಘಟಕ ನಿಲ್ಕೋಡ್ ಶಂಕರ ಹೆಗಡೆ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹ್ಯಾದ್ರಿಯ ಮಡಿಲಲ್ಲಿರುವ ರಾಜ್ಯದ ಪ್ರಸಿದ್ಧ ದೇವಿ ಕ್ಷೇತ್ರಗಳಲ್ಲಿ ಒಂದಾದ ಶ್ರೀಕರಿಕಾನ ಪರಮೇಶ್ವರಿ ದೇವಾಲಯ ಮತ್ತು ವಂದಡಿಕೆ ಶಂಭುಲಿಂಗ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಅರೇಅಂಗಡಿಯಲ್ಲಿ ನೂತನ ಶಿಲೆಯ ಮಹಾದ್ವಾರ ನಿರ್ಮಿಸಲಾಗಿದೆ. ಜೂ.27ರಂದು ಬೆಳಿಗ್ಗೆ 11:30ಕ್ಕೆ ಹೊಸನಗರದ ರಾಘವೇಶ್ವರ ಭಾರತೀ ಸ್ವಾಮೀಜಿಯವರು ತಮ್ಮ ಅಮೃತಹಸ್ತದಿಂದ ಲೋಕರ್ಪಾಣೆ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಶಿಲಾಶಾಸನ ಫಲಕ, ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಮಹಾದಾನಿ ಫಲಕ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಸೌರ ವಿದ್ಯುತ್ ಲೋಕಾರ್ಪಣೆಯನ್ನು ನೆರವೇರಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ದಿನಕರ ಶೆಟ್ಟಿ, ಸುನೀಲ ನಾಯ್ಕ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಸಿ., ಕೆ.ಡಿಸಿಸಿ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ, ಎಸ್ಆರ್ಎಲ್ ಗ್ರೂಪ್ ಮಾಲಕ ವೆಂಕಟ್ರಮಣ ಹೆಗಡೆ ಕವಲಕ್ಕಿ, ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜಿ.ಜಿ.ಶಂಕರ್, ಜಿ.ಪಂ. ಮಾಜಿ ಸದಸ್ಯೆ ಶ್ರೀಕಲಾ ಶಾಸ್ತ್ರಿ, ಶ್ರೀಕರಿಕಾನಮ್ಮ ದೇವಿ ಟ್ರಸ್ಟ್ ಅಧ್ಯಕ್ಷ ವಿಷ್ಣು ಭಟ್ ವಂದೂರು, ಶ್ರೀಕ್ಷೇತ್ರದ ತಾಂತ್ರಿಕ ಶಂಕರ ಭಟ್ಟ ಕಟ್ಟೆ, ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ಪಾಲ್ಗೊಳ್ಳಲಿದ್ದಾರೆ. ಶಿಲಾನ್ಯಾಸ ನಿರ್ಮಾಣಕ್ಕೆ ಆರ್ಥಿಕವಾಗಿ ಒಂದು ಲಕ್ಷಕ್ಕೂ ಅಧಿಕ ಮೊತ್ತದ ಧನಸಹಾಯದ ಮೂಲಕ ನೆರವಾದವರನ್ನು ಹಾಗೂ ವಾಸ್ತುಶಿಲ್ಪಿ ಚಂದ್ರಕಾಂತ ನಾಯ್ಕ, ಉಮೇಶ ಹೆಗಡೆ ಅಬ್ಬಿ, ನ್ಯೂ ಎಲಿಟ್ ಗ್ಲೋಬಲ್ ಸರ್ವಿಸಸ್ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.
ಮುಂಜಾನೆ ದೇವಿಯ ಸನ್ನಿಧಿಯಲ್ಲಿ ನವಚಂಡಿಕಾಯಾಗ ರುದ್ರಾಭೀಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8ರಿಂದ ಸಂಗೀತಾ ನಾಯ್ಕ ಹಡಿನಬಾಳ ಇವರಿಂದ ಭಜನ್ ಸಂಧ್ಯಾ, ಪಂ.ಪರಮೇಶ್ವರ ಹೆಗಡೆ ಕಲ್ಬಾಗ ಇವರಿಂದ ಸಂಗೀತ ಮತ್ತು ನೀಲಕೋಡ ಶಂಕರ ಹೆಗಡೆ ಬಳಗದಿಂದ ದೇವಿಮಹಾತ್ಮೆ ಯಕ್ಷಗಾನ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉದ್ಯಮಿ ನಾಗರಾಜ ನಾಯ್ಕ, ಗ್ರಾ.ಪಂ. ಸದಸ್ಯ ಗಣಪತಿ ಶಂಭು ಭಟ್, ಗ್ರಾಮಸ್ಥರಾದ ಅಶೋಕ ನಾಯ್ಕ, ಗಣಪತಿ ಭಟ್ ಇದ್ದರು.