ದಾಂಡೇಲಿ: ಜಿಲ್ಲೆಯ ಜೀವನದಿಯಾಗಿರುವ ಕಾಳಿ ನದಿಯ ಉಳಿವಿಗೆ ಎಲ್ಲರೂ ಕೈಜೋಡಿಸಬೇಕು. ಈ ವರ್ಷ ಕಳೆದ 40 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಾಳಿ ನದಿಯಲ್ಲಿ ನೀರು ಬತ್ತುತ್ತಿರುವುದು ಆತಂಕಕಾರಿಯಾದ ಬೆಳವಣಿಗೆಯಾಗಿದೆ. ಈ ನಿಟ್ಟಿನಲ್ಲಿ ಕಾಳಿ ನದಿಯ ಉಳಿವಿಗಾಗಿ ಎಲ್ಲರು ಕೈಜೋಡಿಸಬೇಕೆಂದು ದಾಂಡೇಲಿ ತಾಲ್ಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಕರೆ ನೀಡಿದೆ.
ಸಮಿತಿಯ ಅಧ್ಯಕ್ಷ ಅಕ್ರಂ ಖಾನ್, ಪ್ರಧಾನ ಕಾರ್ಯದರ್ಶಿ ಆರ್.ವಿ.ಗಡೆಪ್ಪನವರ ಅವರ ನೇತೃತ್ವದ ನಿಯೋಗ ಹಳೆದಾಂಡೇಲಿಯಲ್ಲಿ ಕಾಳಿ ನದಿ ಪ್ರದೇಶಕ್ಕೆ ಭೇಟಿ ನೀಡಿ ಪತ್ರಕರ್ತರ ಜೊತೆ ಮಾತನಾಡಿ, ಈ ಹಿಂದೆ ಕಾಳಿ ನದಿಯಿಂದ ಅಳ್ನಾವರಕ್ಕೆ ನೀರು ಕೊಂಡೊಯ್ಯುವ ಯೋಜನೆಯನ್ನು ವಿರೋಧಿಸಿ ದಾಂಡೇಲಿ ತಾಲ್ಲೂಕು ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ 53 ದಿನಗಳ ಉಪವಾಸ ಸತ್ಯಾಗ್ರಹವನ್ನು ಕೈಗೊಂಡರೂ ಸರಕಾರ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸದೇ ಯೋಜನೆಯನ್ನು ಅನುಷ್ಠಾನ ಪಡಿಸಿರುವುದು ಖೇದಕರ ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಪ್ರಮುಖರುಗಳಾದ ಸಾಧಿಕ್ ಮುಲ್ಲಾ, ಸೆಬಾಸ್ಟಿಯನ್ ಡಿಮೆಲ್ಲಾ ಇದ್ದರು.