
ಯಲ್ಲಾಪುರ: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಅನೇಕ ರೀತಿಯಲ್ಲಿ ಸನಾಹುತಗಳು ಸಂಭವಿಸಿದ್ದು, ತಾಲೂಕಿನ ಕಳಚೆಯಲ್ಲಿ ಭೂಕುಸಿತ ಉಂಟಾಗಿ ಹಾನಿಗೊಳಗಾದ ಪ್ರದೇಶಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿ ಹಾನಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್, ತಹಸೀಲ್ದಾರ ಶ್ರೀಕೃಷ್ಣ ಕಾಮಕರ್ ಹಾಗೂ ಸ್ಥಳೀಯ ಮುಖಂಡರು, ಅಧಿಕಾರಿಗಳು ಇದ್ದರು.
ಮಳೆಯಿಂದಾದ ಅವಾಂತರದಿಂದ ಚೇತರಿಸಿಕೊಳ್ಳುತ್ತಿರುವ ಜನತೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅರಬೈಲ್ ಘಟ್ಟ ಪ್ರದೇಶದಲ್ಲಿ ಆದ ಗುಡ್ಡ ಕುಸಿತದಿಂದ ಹಲವು ದಿನಗಳ ಕಾಲ ಸಂಚಾರ ಬಂದ್ ಆಗಿದ್ದು, ಈಗ ತೆರವು ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದೆ. ಗುಡ್ಡ ಕುಸಿದು, ಮಣ್ಣು ರಸ್ತೆ ಮೇಲೆ ಬಿದ್ದು ಹೆದ್ದಾರಿ ಸಂಪೂರ್ಣ ರಾಡಿಯಾಗಿದೆ. ದ್ವಿಚಕ್ರ ವಾಹನ ಸವಾರರು ಎಚ್ಚರಿಕೆಯಿಂದಲೇ ವಾಹನ ಚಲಾಯಿಸಬೇಕಾಗಿದೆ. ಹೆದ್ದಾರಿ ಮೇಲೆ ಬಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯದಲ್ಲಿ 5 ಜೆಸಿಬಿಗಳು ನಿರಂತರವಾಗಿ ತೊಡಗಿಕೊಂಡಿವೆ.
ಅತ್ತಿಸವಲಿನಿಂದ ಕೈಗಡಿಗೆ ಹೋಗುವ ಮಾರ್ಗದ ಸಂಪರ್ಕ ಕಡಿತಗೊಂಡಿದ್ದು, ಹಳ್ಳ ದಾಟಲು ತೆಪ್ಪವೇ ಗತಿಯಾಗಿದೆ. ಹಾಗಾಗಿ ಬಿದಿರಿನ ಗಳದಿಂದ ತೆಪ್ಪ ನಿರ್ಮಿಸುವ ಕಾರ್ಯದಲ್ಲಿ ಗ್ರಾಮಸ್ಥರು ನಿರತರಾಗಿರುವುದು ಕಂಡು ಬಂತು.
ತಾಲೂಕಿನ ಮಾಗೋಡ ಸಮೀಪದ ಪ್ರವಾಸಿ ತಾಣ ಜೇನುಕಲ್ಲುಗುಡ್ಡದಲ್ಲಿ ಭೂಕುಸಿತ ಉಂಟಾಗಿರುವುದು ಗೋಚರಿಸುತ್ತಿದೆ. ದೂರದ ಗುಡ್ಡದ ತುದಿಯಿಂದ ಮಣ್ಣು ನದಿಯವರೆಗೂ ಕುಸಿದಿರುವುದು ಕಂಡು ಬರುತ್ತಿದ್ದು, ಗುಡ್ಡದಿಂದ ಹರಿದು ಬರುವ ನೀರು ಬೇಡ್ತಿ ನದಿಯನ್ನು ಸೇರುತ್ತಿದೆ. ಭಾರಿ ಮಳೆಯ ಪರಿಣಾಮ ಈ ಭೂಕುಸಿತ ಉಂಟಾಗಿರುವುದು ಈಗ ಬೆಳಕಿಗೆ ಬಂದಿದೆ.