ಹೊನ್ನಾವರ: ಯೋಗವೆಂದರೆ ಕೇವಲ ದೈಹಿಕ ಕಸರತ್ತಲ್ಲ. ಬದುಕಿನ ಎಲ್ಲ ಹಂತದಲ್ಲಿ, ಸಮಯದಲ್ಲಿ ಯೋಗ ಬೇಕು. ಪ್ರತಿಯೊಬ್ಬರೂ ಯೋಗಿಗಳಾಗಬೇಕು. ಸದಾಚಾರ, ಸುವಿಚಾರ, ಸನ್ನಡತೆ, ಸತ್ಯಸಂಧತೆ, ಭಗವದ್ಭಕ್ತಿ, ಧಾರ್ಮಿಕ ಜೀವನಗಳನ್ನೊಳಗೊಂಡ ಜೀವನವೇ ಯೋಗ ಜೀವನ. ಶ್ರೀಕೃಷ್ಣ ಪರಮಾತ್ಮ ಎಲ್ಲದಕ್ಕೂ ಯೋಗವನ್ನು ಹೇಳಿದ್ದಾನೆ ಎಂದು ಶಿರಸಿ ಈಶ್ವರೀಯ ವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ವೀಣಾಜಿ ಹೇಳಿದರು.
ಅವರು ನಗರದ ಬ್ರಹ್ಮಕುಮಾರೀಸ್ ಸಭಾಗೃಹದಲ್ಲಿ ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಕಾರ್ಯಕ್ರಮವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿದ ಶಾಸಕ ಸುನೀಲ ನಾಯ್ಕ, ಭಾರತೀಯ ಶ್ರೇಷ್ಠ ಪರಂಪರೆಯಲ್ಲಿ ಯೋಗ ಮಹತ್ವದ ಸ್ಥಾನದಲ್ಲಿದೆ. ಭಾರತದ ಯೋಗವನ್ನು ಜಗತ್ತು ಒಪ್ಪಿಕೊಂಡಿದ್ದು ಜೂನ್ 21ರಂದು ಅಂತರರಾಷ್ಟ್ರೀಯ ಯೋಗದಿನವನ್ನು ಆಚರಿಸಿದ್ದೇವೆ. ಭಾರತದ ಪ್ರಧಾನಿಯಿಂದ ಆರಂಭಿಸಿ ಸೈನಿಕರು, ಉದ್ಯೋಗಿಗಳು, ಶಿಕ್ಷಕರು ಎಲ್ಲರೂ ಯೋಗದಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲರೂ ಯೋಗಿಗಳಾಗೋಣ, ಯೋಗ ಮಾರ್ಗದಲ್ಲಿ ಸಾಗೋಣ ಎಂದು ಕರೆನೀಡಿದರು.
ಯೋಗ ದಿನದ ಅಂಗವಾಗಿ ತಾಲೂಕಿನಲ್ಲಿ ಬಹುಕಾಲ ಯೋಗ ಕಲಿಸುತ್ತ ಬಂದ 15ಕ್ಕೂ ಹೆಚ್ಚು ಯೋಗ ಶಿಕ್ಷಕರನ್ನು ಸನ್ಮಾನಿಸಲಾಯಿತು. ಬ್ರಹ್ಮಕುಮಾರಿ ಸಂಘಟಿಸಿದ ವೇದ ಶಿಬಿರದಲ್ಲಿ ಪಾಲ್ಗೊಂಡ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ತಾರಾ ಭಟ್ ಭಕ್ತಿಗೀತೆ ಹಾಡಿದರು. ಬ್ರಹ್ಮಕುಮಾರಿ ಬಿ.ಕೆ.ಉಷಾ ಸ್ವಾಗತಿಸಿ ವಂದಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ. ಉದ್ಯಮಿ ವಿಠ್ಠಲದಾಸ್ ತೇಲಂಗ, ಪತ್ರಕರ್ತ ಜಿ.ಯು.ಭಟ್ ಉಪಸ್ಥಿತರಿದ್ದರು.