ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಮೊಗೇರ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಅನುಸರಿಸುತ್ತಿರುವ ಮಾನದಂಡಗಳನ್ನು ಮುಂದುವರೆಸುವ ಅಥವಾ ಮಾರ್ಪಾಡು ಮಾಡುವ ಕುರಿತು ಪರಿಶೀಲಿಸಲು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ ಅವರ ಅಧ್ಯಕ್ಷತೆಯಲ್ಲಿ 5 ಜನರನ್ನೊಳಗೊಂಡಂತೆ ಸಮಿತಿ ರಚಿಸಿ, ಸಮಗ್ರವಾಗಿ ಪರಿಶೀಲಿಸಿ 3 ತಿಂಗಳ ಒಳಗೆ ವರದಿಯನ್ನು ನೀಡುವಂತೆ ಸರಕಾರ ಆದೇಶ ನೀಡಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.
ತಾಲೂಕಿನಲ್ಲಿ ಮೊಗೇರ ಸಮಾಜದವರು ಪರಿಶಿಷ್ಟ ಜಾತಿ ಪ್ರಮಾಣಪತ್ರಕ್ಕಾಗಿ ಆಗ್ರಹಿಸಿ ಕಳೆದ 93 ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಅವರು ಗುರುವಾರದಂದು ಸಮಾಜದ ಮುಖಂಡರೊಂದಿಗೆ ಉಪವಿಭಾಗಾಧಿಕಾರಿ ಕಛೇರಿಯಲ್ಲಿ ಸಭೆ ನಡೆಸಿದರು.
ಮೊಗೇರರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವ ಕುರಿತಾದ ಪರ- ವಿರೋಧದ ಬಗ್ಗೆ ನಾವು ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದು, ಸರ್ಕಾರದ ಮಟ್ಟದಲ್ಲಿ ಕೂಡ ಈಗಾಗಲೇ ಎರಡು ಬಾರಿ ಸಭೆ ನಡೆಸಿ ಒಂದು ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಸದ್ಯ ನೇಮಕಗೊಂಡಿರುವ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ ಅವರ ಅಧ್ಯಕ್ಷತೆಯ ಸಮಿತಿ ಸಮಗ್ರವಾಗಿ ಪರಿಶೀಲಿಸಿ 3 ತಿಂಗಳ ಒಳಗೆ ವರದಿಯನ್ನು ನೀಡಲು ಸರಕಾರ ಆದೇಶ ನೀಡಿದೆ. ಸಮಿತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮುಖ್ಯ ಕಾರ್ಯನಿರ್ವಹಾಧಿಕಾರಿ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉತ್ತರ ಕನ್ನಡ ಜಿಲ್ಲಾಧಿಕಾರಿ, ಮೈಸೂರು ಮಾನವಶಾಸ್ತ್ರ ವಿಭಾಗದ ಪ್ರೊ.ಗಂಗಾಧರ ಹಾಗೂ ಸಮಾಜ ಕಲ್ಯಾಣ ಇಲಾಖೆ ಉತ್ತರ ಕನ್ನಡ ಜಿಲ್ಲಾ ಉಪನಿರ್ದೇಶಕರನ್ನೊಳಗೊಂಡಂತೆ ಸಮಿತಿ ರಚಿಸಲಾಗಿದೆ ಎಂದರು.
ಮೊಗೇರ ಸಮಾಜದ ಮುಖಂಡ ಎಫ್.ಕೆ.ಮೊಗೇರ ಮಾತನಾಡಿ, ನಮಗೆ ಸರ್ಕಾರ ಅನ್ಯಾಯ ಮಾಡುತ್ತಿಲ್ಲ. ನಮಗೆ ನೇರವಾಗಿ ಅನ್ಯಾಯ ಮಾಡುತ್ತಿರುವುದು ಸ್ಥಳೀಯ ಆಡಳಿತದವರು. ನಮ್ಮ ಮಕ್ಕಳಿಗೆ ನೀವು ಜಾತಿ ಪ್ರಮಾಣ ಪತ್ರವನ್ನು ನೀಡುತ್ತಿಲ್ಲ ಅದರಿಂದ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಸುಳ್ಳು ಜಾತಿ ಪ್ರಮಾಣ ಪತ್ರ ಎಂದು ನಮ್ಮ ಸಮಾಜದ ಜನರ ವಿರುದ್ಧ ಹೂಡಿದ ದೂರುಗಳನ್ನು ಕೂಡಲೇ ಹಿಂಪಡೆಯಬೇಕು. ಪ್ರವರ್ಗ-1ರಲ್ಲಿರುವ ಮೊಗೇರ ಜಾತಿಯ ಹೆಸರನ್ನು ಉತ್ತರಕನ್ನಡ ಜಿಲ್ಲೆಯ ತಂತ್ರಾಂಶದಿಂದ ಕೂಡಲೇ ಕೈಬಿಡಬೇಕು. ಈ ಬೇಡಿಕೆಗಳು ಈಡೇರುವ ತನಕ ನಮ್ಮ ಸಮಾಜದಿಂದ ಅನಿರ್ದಿಷ್ಟ ಕಾಲದ ಮುಷ್ಕರವನ್ನು ಮುಂದುವರಿಸುತ್ತೇವೆ ಎಂದರು.
ಮಾಜಿ ಶಾಸಕ ಮಂಕಾಳ ವೈದ್ಯ ಮಾತನಾಡಿ, ನಮ್ಮ ಸಮುದಾಯವು ಪರಿಶಿಷ್ಟ ಜಾತಿ ಸೌಲಭ್ಯವನ್ನು 1976ರಿಂದ ಕೇಂದ್ರ ಸರಕಾರದ ಅಧಿಕೃತ ಆದೇಶದಂತೆ ಪಡೆಯುತ್ತಿದ್ದರು. ಆದರೆ 14 ವರ್ಷಗಳಿಂದ ನಮಗೆ ಸಿಗಬೇಕಾದ ಪರಿಶಿಷ್ಟ ಜಾತಿ ಸೌಲಭ್ಯಗಳನ್ನು ಜಿಲ್ಲಾಡಳಿತ ತಡೆಹಿಡಿದಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ಶಿಷ್ಯವೇತನ, ಸರಕಾರ ವಸತಿ ಸೌಲಭ್ಯ, ಉನ್ನತ ವ್ಯಾಸಂಗಕ್ಕೆ ಶಾಲಾ ಕಾಲೇಜುಗಳ ಆಯ್ಕೆ ಮುಂತಾದವುಗಳಿಗೆ ತೊಡಕಾಗಿದೆ ಎಂದರು.
ಮುಖಂಡ ಅಣ್ಣಪ್ಪ ಮೊಗೇರ, ಸರ್ಕಾರವು ನಮ್ಮನ್ನು ಮೀನುಗಾರ ಮೊಗೇರರು ಎಂದು ವಿಶೇಷವಾಗಿ ಪರಿಗಣಿಸಿ, ನಮ್ಮನ್ನು ಪರಿಶಿಷ್ಟ ಜಾತಿಯವರಲ್ಲ ಎಂದು ಸಾರುತ್ತಿದೆ. ಹೈಕೋರ್ಟ್, ಸುಪ್ರೀಂಕೋರ್ಟ್, ಆಯೋಗದ ಆದೇಶವನ್ನು ಕೂಡ ಸರಿಯಾಗಿ ಅರ್ಥೈಸಿಕೊಳ್ಳದೆ ನಮ್ಮ ಮೇಲೆ ಗಧಾ ಪ್ರಹಾರವನ್ನು ಮಾಡುತ್ತಿದೆ. ಸರ್ಕಾರದವರ ಈ ನಡೆಯಿಂದ ನಮ್ಮ ಮಕ್ಕಳ ಭವಿಷ್ಯ ಹಾಳಾಗುತ್ತಿದೆ ಎಂದರು.
ನಂತರ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಯಾವುದೇ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಅಥವಾ ತೆಗೆದು ಹಾಕಲು ನಮಗೆ ಅಧಿಕಾರವಿಲ್ಲ. ನಾವು ಕೇವಲ ನಿಮ್ಮ ಬೇಡಿಕೆಗಳನ್ನು ಕಳುಹಿಸಬಹುದು ಅಷ್ಟೇ. ಸರ್ಕಾರ ನಿಮಗೆ ನ್ಯಾಯ ಒದಗಿಸಿಕೊಡುವ ಸಲುವಾಗಿಯೇ ಆಯೋಗ ರಚನೆಯನ್ನು ಮಾಡಿದೆ ಎಂದರು. ನಿಮಗೆ ಇಷ್ಟು ದಿನ ಶಾಂತರೀತಿಯಿಂದ ಹೋರಾಟ ಮಾಡಲು ಅವಕಾಶ ಮಾಡಿಕೊಟ್ಟಿದ್ದೇವೆ. ನಿಮ್ಮ ಹೋರಾಟ ಕೈಮೀರಿ ಹೋದರೆ ನಿಮ್ಮ ಮೇಲೆ ಕ್ರಮ ಕೈಗೊಳ್ಳಬೇಕಾಗುತ್ತದೆ. ನಿಮಗೆ ಈ ವಿಷಯದ ಕುರಿತು ಎಚ್ಚರವಿರಲಿ ಎಂದರು. ಈಗಲಾದರೂ ಈ ಪ್ರತಿಭಟನೆಯನ್ನು ಮುಕ್ತಾಯಗೊಳಿಸಿ ಎಂದರು.
ಸಭೆಯ ಕೊನೆಯಲ್ಲಿ ಮೊಗೇರ ಸಮಾಜದ ಮುಖಂಡರು ಒಕ್ಕೊರಲಿನಿಂದ, ನಮಗೆ ಬೇಕಾಗಿರುವುದು ಯಾವುದೇ ಸಮಿತಿಯಲ್ಲ. ನಮಗೆ ಬೇಕಾಗಿರುವುದು ನ್ಯಾಯ. ನಾವು 4 ತಿಂಗಳಿಗೂ ಹೆಚ್ಚು ಸಮಯದಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ಆಗಲೇ ಸಮಿತಿಯನ್ನು ರಚಿಸಬಹುದಿತ್ತು. ನಾವು ಪ್ರತಿಭಟನಾಕಾರರೊಂದಿಗೆ ಚರ್ಚಿಸಿ ನಮ್ಮ ಹೋರಾಟದ ರೂಪುರೇಷೆಗಳನ್ನು ನಿರ್ಮಿಸಿಕೊಳ್ಳುತ್ತೇವೆ. ಅಲ್ಲಿಯ ತನಕ ನಾವು ಪ್ರತಿಭಟನೆ ಮುಕ್ತಾಯಗೊಳಿಸುವುದು ಇಲ್ಲ ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್, ಉಪವಿಭಾಗಾಧಿಕಾರಿ ಮಮತಾದೇವಿ ಜಿ.ಎಸ್., ತಹಶೀಲ್ದಾರ ಡಾ.ಸುಮಂತ, ಡಿವೈಎಸ್ಪಿ ಬೆಳ್ಳಿಯಪ್ಪ, ಸಿಪಿಐ ದಿವಾಕರ, ಮೊಗೇರ ಸಮಾಜದ ಮುಖಂಡರು ಇದ್ದರು.