ಹೊನ್ನಾವರ: ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಬಿಜೆಪಿ ಮಂಡಲದ ವತಿಯಿಂದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನ್ ದಿವಸ್ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ದೇಶಿಸಿ ಶಾಸಕ ಸುನೀಲ ನಾಯ್ಕ ಮಾತನಾಡಿ, ಸ್ವತಂತ್ರ ಭಾರತದ ಲೋಹಪುರುಷ ಡಾ|| ಶ್ಯಾಮ್ ಪ್ರಸಾದ್ ಮುಖರ್ಜಿ ಆಗಿದ್ದರು. ಭಾರತೀಯ ಸಂಸ್ಕೃತಿಯ ಆಧಾರದ ಮೇಲೆ ದೇಶವನ್ನು ಪುನರ್ ನಿರ್ಮಾಣ ಮಾಡುವ ಹಾಗೂ ಜಗತ್ತಿನಲ್ಲಿ ಭಾರತವನ್ನು ಪ್ರಬಲ ರಾಷ್ಟ್ರವನ್ನಾಗಿಸುವ ಗುರಿಯನ್ನು ಹೊಂದಿ, ಆ ಮಹಾನ್ ಕಾರ್ಯಕ್ಕೆ ತಮ್ಮ ಬದುಕನ್ನು ಮುಡುಪಾಗಿಟ್ಟಿದ್ದರು.
ಅವರು ಶ್ರೇಷ್ಠ ವಿದ್ವಾಂಸರು, ಶ್ರೇಷ್ಠ ರಾಜನೀತಿ ತಜ್ಞ, ಅಸಾಧಾರಣ ಸಂಸದೀಯ ಪಟು, ಭಾರತೀಯ ರಾಜಕೀಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಪಾಕಿಸ್ಥಾನದಲ್ಲಿ ಹಿಂದುಗಳ ಮೇಲೆ ನಡೆದ ದೌರ್ಜನ್ಯಕ್ಕೆ ಕಿಡಿಕಾಡಿದರು. ಮಂತ್ರಿ ಮಂಡಲಕ್ಕೆ ರಾಜೀನಾಮೆ ನೀಡಿದರು. ನೀತಿ, ತತ್ವದ ಆಧಾರದ ಮೇಲೆ ಮಂತ್ರಿ ಪದವಿ ತ್ಯಾಗ ಮಾಡಿದ ಸ್ವಾತಂತ್ರ‍್ಯ ಭಾರತದ ಪ್ರಪ್ರಥಮ ರಾಷ್ಟ್ರ ನಾಯಕರಾಗಿದ್ದರು. ‘ಭಾರತೀಯ ಜನಸಂಘ’ ಎಂಬ ಹೊಸ ಪಕ್ಷಕ್ಕೆ ನಾಂದಿ ಹಾಡಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಬಿಜೆಪಿ ಮಂಡಲಾಧ್ಯಕ್ಷ ರಾಜೇಶ ಭಂಡಾರಿ, ಪ.ಪಂ.ಅಧ್ಯಕ್ಷ ಶಿವರಾಜ ಮೇಸ್ತ, ಉಪಾಧ್ಯಕ್ಷೆ ನಿಶಾ ಶೇಟ್, ಮುಂಖಡರಾದ ಉಮೇಶ ನಾಯ್ಕ, ಎಂ.ಜಿ.ನಾಯ್ಕ, ಎನ್.ಎಸ್.ಹೆಗಡೆ, ನಾಗರಾಜ ನಾಯಕ್ ತೊರ್ಕೆ, ಮಂಜುನಾಥ ನಾಯ್ಕ, ಭಾಗ್ಯ ಮೇಸ್ತ, ಪಕ್ಷದ ಕಾರ್ಯಕರ್ತರು ಇದ್ದರು.