ಕಾರವಾರ: ತಾಲ್ಲೂಕಿನ ಗೋಟೆಗಾಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋಯರ ಗ್ರಾಮದಲ್ಲಿ ಇತ್ತೀಚೆಗೆ ವಿದ್ಯುತ್ ತಂತಿ ಅವಘಡದಲ್ಲಿ ಮೃತಪಟ್ಟ ತಾಮ್ಡೋ ಗೋವಿಂದ ಬಂಡೇಕರ ಕುಟುಂಬಕ್ಕೆ 5 ಲಕ್ಷ ವೆಚ್ಚ ಮೊತ್ತದ ಪರಿಹಾರದ ಚೆಕ್ ಅನ್ನು ಶಾಸಕಿ ರೂಪಾಲಿ ಎಸ್.ನಾಯ್ಕ ವಿತರಣೆ ಮಾಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.
ಬಳಿಕ ಸ್ಥಳೀಯರೊಂದಿಗೆ ಮಾತನಾಡಿ, ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಸಮಸ್ಯೆ ಇರುವಲ್ಲಿ ವಿದ್ಯುತ್ ತಂತಿ, ಕಂಬ ಬದಲಾವಣೆಗೆ ತಿಳಿಸಲಾಗಿದೆ. ಅಲ್ಲಲ್ಲಿ ಬೀದಿ ದೀಪ ಅಳವಡಿಕೆಯನ್ನು ಮಾಡಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಸೂಚಿಸಿದರು. ಇಲ್ಲಿಯ ಜನರು ಗೋಟೆಗಾಳಿಗೆ ಹೋಗಿ ಪಡಿತರವನ್ನು ತರುತ್ತಿದ್ದಾರೆ. ಸ್ಥಳೀಯವಾಗಿಯೇ ಸಿಗುವಂತೆ ಕ್ರಮಕ್ಕೆ ಮುಂದಾಗಬೇಕು. ಹಾಗೂ 60 ವರ್ಷ ಮೇಲ್ಪಟ್ಟವರ ಪಿಂಚಣಿ ವ್ಯವಸ್ಥೆ ಇನ್ನೀತರ ಯಾವುದೇ ಸಮಸ್ಯೆಗಳಿದ್ದರೂ ನಿವಾರಿಸುವಂತೆ ತಹಶೀಲ್ದಾರರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ ಗುನಗಿ, ಗೋಟೆಗಾಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪ್ರಭಾ, ಉಪಾಧ್ಯಕ್ಷೆ ವರ್ಷಾ, ಸದಸ್ಯರಾದ ಅನಿಲ, ಸುಧಾಕರ ವೇಳಿಪ್, ತಹಶಿಲ್ದಾರ ಎನ್.ಎಫ್.ನರೋನ, ಹೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು.