ಹೊನ್ನಾವರ: ಯಾರೇ ಗೆದ್ದರು, ಸೋತರು ಅವರೆಲ್ಲರು ನನ್ನವರು ಆಟ ಎಂದ ಮೇಲೆ ಸ್ಪರ್ಧೆ ಇರುವುದು ಸಹಜ. ಆದರೆ ಅದು ಹಿತಮಿತವಾಗಿರಲಿ. ಸ್ಪರ್ಧೆ ಮಾಡುವಾಗ ಆಟದ ಪ್ರವೃತ್ತಿ ಇರಲಿ. ಆದರೆ ದ್ವೇಷ ಭಾವನೆ ಬೇಡ ಎಂದು ಸ್ಪರ್ಧಾಳುಗಳಿಗೆ ಫಾದರ್ ಥಾಮಸ್ ಕಿವಿಮಾತು ಹೇಳಿದರು.
ಆರೋಗ್ಯ ಮಾತಾ ದೇವಾಲಯ ಗುಂಡಬಾಳ, ಸಂತ ಅಂತೋನಿ ಪಿತೃ ಸಂಘದ ವತಿಯಿಂದ ಸಂತ ಸ್ನಾನಿಕ ಯೋಹನ್ನಾರ ಹಬ್ಬದ ಪ್ರಯುಕ್ತ 57ನೇ ವರ್ಷದ ನಾಡದೋಣಿ ಸ್ಪರ್ಧೆ ತಾಲೂಕಿನ ಚಿಕ್ಕನಕೋಡ್ ಗ್ರಾ.ಪಂ. ವ್ಯಾಪ್ತಿಯ ಗುಂಡಬಾಳ ಮುಟ್ಟಾದಲ್ಲಿ ನಡೆಯಿತು.
ಸ್ಪರ್ಧೆ ಆರಂಭಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮವನ್ನು ಆರೋಗ್ಯ ಮಾತಾ ದೇವಾಲಯದ ಧರ್ಮ ಗುರುಗಳಾದ ಫಾದರ್ ಥಾಮಸ್, ಶಾಸಕ ಸುನೀಲ್ ನಾಯ್ಕ ಸೇರಿದಂತೆ ಗಣ್ಯರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಶಾಸಕ ಸುನೀಲ್ ನಾಯ್ಕ ಮಾತನಾಡಿ, ಜಿಲ್ಲೆಗೆ ಒಂದು ಮಾದರಿ ಕಾರ್ಯಕ್ರಮವಾಗಿದೆ. ಯಾವುದೇ ಕಾರ್ಯಕ್ರಮ ನಿರಂತರವಾಗಿ ಪ್ರತಿವರ್ಷ ಆಯೋಜನೆ ಅಷ್ಟೊಂದು ಸುಲಭವಲ್ಲ. ಸಂಘ ಎಂದಾಗ ಮೂರೂ ನಾಲ್ಕು ವರ್ಷ ಮಾಡಿ ಕಾರ್ಯಕ್ರಮವನ್ನು ನಡೆಸಿ ಮೊಟಕು ಮಾಡುತ್ತಾರೆ. ದೋಣಿ ಸ್ಪರ್ಧೆ ಇದು ಒಂದು ಸಾಂಸ್ಕೃತಿಕ ಸೊಬಗು. ಹಲವಾರು ಭಾಗದಲ್ಲಿ ಇದು ನಶಿಸಿ ಹೋಗಿದೆ. ಆದರೆ ಈ ಊರಿನವರು ಸತತ ಐವತ್ತೇಳು ವರ್ಷಗಳಿಂದ ಕಾರ್ಯಕ್ರಮವನ್ನ ತುಂಬಾ ಸುಂದರವಾಗಿ ಎಲ್ಲರೂ ಒಗ್ಗಟ್ಟಾಗಿ ಒಂದು ಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದೀರಿ ಎಂದು ಅಭಿನಂದಿಸಿದರು.
ಸೇಫ್ ಸ್ಟಾರ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಜಿ.ಜಿ.ಶಂಕರ್ ಮಾತನಾಡಿ, ವಿಶ್ವಕ್ಕೆ ಶಾಂತಿ ಮಂತ್ರ ಸಾರಿದ ಸಮುದಾಯವೆಂದರೆ ಅದು ಕ್ರೈಸ್ತ ಸಮುದಾಯವಾಗಿದೆ. ಶಿಕ್ಷಣ, ಕ್ರೀಡೆ, ಆರೋಗ್ಯ, ಆರ್ಥಿಕ, ಸಾಂಸ್ಕೃತಿಕ ಎಲ್ಲಾ ಕ್ಷೇತ್ರದಲ್ಲಿಯು ಕೊಡುಗೆ ಈ ಸಮಾಜದವರು ಕೊಡುಗೆ ನೀಡಿದ್ದಾರೆ. ಎಲ್ಲಾ ಧರ್ಮದವರನ್ನು ಸಹೋದರತ್ವ, ಸಾಮರಸ್ಯ ಭಾವನೆಯಿಂದ ನೋಡುತ್ತಿದ್ದಾರೆ ಎಂದರು. ನಮ್ಮ ಜಿಲ್ಲೆಗೆ ಈ ಸಮುದಾಯದ ಕೊಡುಗೆ ಅಪಾರವಾಗಿದೆ ಎಂದರು. ಸ್ಪರ್ಧಾಳುಗಳೆಲ್ಲ ಎಲ್ಲರೂ ಒಂದೇ ಎಂಬ ಭಾವನೆಯಲ್ಲಿ ಸ್ಫರ್ಧೆಯಲ್ಲಿ ಭಾಗವಹಿಸಿ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಚಿಕ್ಕನಕೋಡ ಗ್ರಾ.ಪಂ ಅಧ್ಯಕ್ಷ ವಿಘ್ನೇಶ್ವರ ಹೆಗಡೆ, ಸದಸ್ಯರಾದ ಲಕ್ಷ್ಮೀ ಹಳ್ಳೆರ್, ನಾಗೇಶ್ ನಾಯ್ಕ, ಮಂತ್ರು ಫರ್ನಾಂಡೀಸ್, ಶ್ಯಾಮಲಾ, ಹಡಿನಬಾಳ ಗ್ರಾ.ಪಂ ಸದಸ್ಯ ಸಚಿನ್ ಶೇಟ್, ಮಾಜಿ ತಾ.ಪಂ ಸದಸ್ಯ ಆರ್.ಪಿ.ನಾಯ್ಕ, ಫಾದರ್ ರೋಮಿಯೊ, ಫಾದರ್ ಬೆನ್ಸನ್, ಹೆನ್ರಿ ಲೀಮಾ, ಶಿಕ್ಷಕಿ ಪಿಲೋಮಿನಾ ಫರ್ನಾಂಡೀಸ್, ಸಿಸ್ಟರ್ ಜೊಸ್ಬಿನಾ, ವಿನೋದ್ ಪೆರೆರಾ ಮತ್ತಿತರರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ನಾಡದೋಣಿ ಸ್ಪರ್ಧೆ ನಡೆಯಿತು.
.
ದೋಣಿ ಸ್ಪರ್ಧೆಯಲ್ಲಿ ಪ್ರಥಮ ಸ್ಧಾನವನ್ನು ಸಂತ ಅಂತೋನಿ ವಾರ್ಡ್, ದ್ವಿತೀಯ ಸ್ಥಾನ ಹೋಲಿ ಕ್ರಾಸ್ ವಾರ್ಡ್ ಹಾಗೂ ತೃತೀಯ ಸ್ಥಾನವನ್ನು ಸೇಂಟ್ ಜೋಸೆಫ್ ವಾರ್ಡ್ ಪಡೆದುಕೊಂಡಿತು. ಸಂತ ಅಂತೋನಿ ಪಿತೃ ಸಂಘದ ಅಧ್ಯಕ್ಷ ವಿಲಿಯಂ ಅಲ್ಮೇಡಾ ಕಾಯರ್ಕ್ರಮದ ಉಸ್ತುವಾರಿ ವಹಿಸಿದ್ದರು.