ಸಿದ್ದಾಪುರ: ಪಟ್ಟಣದ ಕೊಂಡ್ಲಿಯಲ್ಲಿರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಸ್ಥಳೀಯ ಪುರೋಹಿತ್ ಜನರಲ್ ಸ್ಟೋರ್ ಹಾಗೂ ಜಗದಾಂಬಾ ಇಲೆಕ್ಟ್ರಿಕಲ್ ಅಂಗಡಿಯವರು ಶೈಕ್ಷಣಿಕ ಸಾಮಗ್ರಿಯನ್ನು ವಿತರಿಸಿದರು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 90ಕ್ಕೂ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಹಶೀಲ್ದಾರ ಸಂತೋಷ ಭಂಡಾರಿ ಮಾತನಾಡಿ, ವಿದ್ಯಾರ್ಥಿಗಳಿಗೆ ಒಂದು ಗುರಿ ಇರಬೇಕು. ಅಂಕ ಹೆಚ್ಚು ಪಡೆಯುವುದೇ ಗುರಿ ಆಗಿರಬಾರದು. ಏನಾದರೂ ಸಾಧನೆ ಮಾಡಬೇಕು ಎಂಬ ತುಡಿತ ಇರಬೇಕು. ಎಸ್‌ಎಸ್‌ಎಲ್‌ಸಿಯಲ್ಲಿ ಕಡಿಮೆ ಅಂಕ ಪಡೆದ ಎಷ್ಟೋ ಜನರು ಐಎಎಸ್ ಸೇರಿದಂತೆ ಹಲವು ಉನ್ನತ ವಿದ್ಯಾಭ್ಯಾಸ ಮಾಡಿ ಬದುಕಿನಲಿ ಸಾಧನೆ ಮಾಡಿದ್ದಾರೆ. ಆದರೆ ಗೆಲುವು ನಮ್ಮನ್ನು ಮುಂದಕ್ಕೆ ಹೋಗುವಂತೆ ಮಾಡುತ್ತದೆ. ಇಂದಿನ ಈ ಸನ್ಮಾನ ನಿಮ್ಮೆಲ್ಲರಿಗೂ ಸ್ಪೂರ್ತಿಯಾಗಬೇಕು. ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಇಲ್ಲಿಯ ವ್ಯಾಪಾರಸ್ಥರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ. ಇಂತಹ ಕಾರ್ಯ ಸ್ತುತ್ಯಾರ್ಹವಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ನಿಲಯದ ಮೇಲ್ವಿಚಾರಕ ಕೆ.ಕೆ.ಗಣಪತಿ, ನಮ್ಮ ವಸತಿನಿಲಯದಲ್ಲಿ 50 ವಿದ್ಯಾರ್ಥಿಗಳಿದ್ದು, ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ 15 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 10 ವಿದ್ಯಾರ್ಥಿಗಳು ಶೇ 80ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕಿಂತ ಹೆಚ್ಚಿನ ಸಾಧನೆಯನ್ನು ಇಲ್ಲಿಯ ವಿದ್ಯಾರ್ಥಿಗಳು ಮಾಡಲಿದ್ದಾರೆ ಎಂದು ಹೇಳಿದರು.
ಅನಂತ ನಿರೂಪಣೆ ಮಾಡಿದರು. ವಿದ್ಯಾರ್ಥಿ ಭರತ ಮಹಾಲೆ ಸ್ವಾಗತಿಸಿದರು. ಪ್ರಜ್ವಲ ಸಂಗಡಿಗರು ಪ್ರಾರ್ಥನೆ ಹಾಡಿದರು. ಪ್ರತೀಕ್ ವಂದನಾರ್ಪಣೆ ಮಾಡಿದರು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿ ನೀಡಿದ ಹನುಮಾನ ಸಿಂಗ್, ಜಗದೀಪ್ ಸಿಂಗ್ ಉಪಸ್ಥಿತರಿದ್ದರು.