ದಾಂಡೇಲಿ: ನಿಲ್ಲಿಸಿಟ್ಟ ದ್ವಿಚಕ್ರ ವಾಹನದಲ್ಲಿದ್ದ ಹಣವನ್ನು ಯಾರೂ ಕದ್ದೊಯ್ಯದಂತೆ ರಕ್ಷಣೆ ನೀಡಿ, ಕೊನೆಗೆ ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಘಟನೆ ನಗರದ ಜೆ.ಎನ್.ರಸ್ತೆಯಲ್ಲಿ ಗುರುವಾರ ನಡೆದಿದೆ.
ನಗರದ ಜೆ.ಎನ್.ರಸ್ತೆಯಲ್ಲಿ ಮಂಜು ಆಪ್ಟಿಕಲ್ಸ್ ಮುಂಭಾಗದಲ್ಲಿ ದ್ವಿಚಕ್ರ ವಾಹನವೊಂದನ್ನು ನಿಲ್ಲಿಸಿ ಹೋಗಿದ್ದರು. ದ್ವಿಚಕ್ರ ವಾಹನದಲ್ಲಿ ಬ್ಯಾಂಕಿಗೆ ತುಂಬಲೆಂದು ತಂದಿದ್ದ ಹಣ ಮತ್ತು ಬ್ಯಾಂಕ್ ಚಲನ್ ಅನ್ನು ದ್ವಿಚಕ್ರ ವಾಹನದ ಹ್ಯಾಂಡ್ಲ್ ಕೆಳಗಡೆ ಕೈ ಚೀಲದಲ್ಲಿ ನೇತು ಹಾಕಲಾಗಿತ್ತು. ಕೈ ಚೀಲದಲ್ಲಿ ಹಣವಿರುವುದು ಕಾಣುತ್ತಿತ್ತು. ಇದನ್ನು ನೋಡಿದ ಅಲ್ಲೆ ಇದ್ದ ಎಸ್.ಎಸ್.ಕಂಫರ್ಟ್ಸ್ನ ವ್ಯವಸ್ಥಾಪಕ ಎಂ.ಡಿ.ಸಲೀಂ, ಸುರೇಶಕುಮಾರ್, ಮಂಜು ಆಪ್ಟಿಕಲ್ಸ್ನ ಮಂಜುನಾಥ್, ವಿಡಿಯೋಗ್ರಾಫರ್ ಯಹೋನಾ ಎಗ್ಗೋನಿ ಮತ್ತು ಶ್ರೀ.ಕ್ಷೇತ್ರ ಧ.ಗ್ರಾ.ಯೋಜನಾ ಕಚೇರಿಯ ಸಿಬ್ಬಂದಿ ಹನುಮಂತ ತಳವಾರ ಅವರುಗಳು ಸರಿ ಸುಮಾರು ಒಂದು ಗಂಟೆಗಳವರೆಗೆ ಹಣ ಯಾರೊ ಕೊಂಡೊಯ್ಯದಂತೆ ರಕ್ಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮದವರನ್ನು ಸ್ಥಳಕ್ಕೆ ಕರೆಸಿಕೊಂಡ ಇವರುಗಳು, ಘಟನೆಯನ್ನು ವಿವರಿಸಿದ್ದಾರೆ. ತಕ್ಷಣವೆ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಯಿತು.
ನಗರ ಠಾಣೆಯ ಪಿಎಸೈ ಕಿರಣ್ ಪಾಟೀಲ ಅವರು ಪೊಲೀಸ್ ಸಿಬ್ಬಂದಿ ಜಯನ್ ಗೌಡ ಪಾಟೀಲ ಮತ್ತು ಶಿವರಾಜ ಬಿ.ಎಸ್ ಅವರನ್ನು ಸ್ಥಳಕ್ಕೆ ಕಳುಹಿಸಿಕೊಟ್ಟರು. ಸ್ಥಳಕ್ಕಾಗಮಿಸಿದ ಪೊಲೀಸರು ದ್ವಿಚಕ್ರ ವಾಹನದಲ್ಲಿದ್ದ ಕೈ ಚೀಲದಿಂದ ಹಣವನ್ನು ತೆಗೆದು ಏಣಿಕೆ ಮಾಡಿದಾಗ 13,200 ರೂ. ಹಣವಿರುವುದು ಪತ್ತೆಯಾಗಿದೆ. ಹಣದ ಜೊತೆ ಇರುವ ಸೆಂಟ್ರಲ್ ಬ್ಯಾಂಕ್ ಚಲನ್ ನೋಡಿ ಹತ್ತಿರದಲ್ಲಿರುವ ಸೆಂಟ್ರಲ್ ಬ್ಯಾಂಕಿಗೆ ಹೋಗಿ, ಹಣವನ್ನು ಸಂಬಂಧಿಸಿದ ವಾರಸುದಾರರಿಗೆ ಒಪ್ಪಿಸಿದ್ದಾರೆ.