ದಾಂಡೇಲಿ: ನಗರ ಹಾಗೂ ಗ್ರಾಮೀಣ ಪೊಲೀಸ್ ಠಾಣೆ ಮತ್ತು ಸಿವಿಲ್ ನ್ಯಾಯಾಲಯದ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಸಾಗಾಣಿಕೆ ವಿರೋಧಿ ದಿನಾಚರಣೆಯ ನಿಮಿತ್ತ ಜನಜಾಗೃತಿ ಮೂಡಿಸಲು ನಗರದ ಸಿವಿಲ್ ನ್ಯಾಯಾಲಯದ ಆವರಣದಿಂದ ಸೈಕಲ್ ಜಾಥಾ ನಡೆಸಲಾಯಿತು.
ಸೈಕಲ್ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ರೋಹಿಣ ಡಿ.ಬಸಾಪುರ, ಮಾದಕ ದ್ರವ್ಯ ಸೇವನೆ ಮತ್ತು ಸಾಗಾಣಿಕೆಯ ವಿರುದ್ಧ ಜನರು ಜಾಗೃತರಾಗಬೇಕಾಗಿದೆ. ನಾವು ನಮ್ಮಲ್ಲಿ ಉತ್ತಮವಾದ ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಸದೃಢ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ಕರೆ ನೀಡಿದರು.
ಡಿವೈಎಸ್ಪಿ ಗಣೇಶ್ ಕೆ.ಎಲ್. ಮಾತನಾಡಿ, ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವಂತಹ ಮಾದಕ ದ್ರವ್ಯ ಸೇವನೆ ಮತ್ತದರ ಸಾಗಾಟದ ವಿರುದ್ದ ಜನರಲ್ಲಿ ಜಾಗೃತಿ ಮೂಡಿಸಬೇಕೆಂಬ ಉದ್ದೇಶದಿಂದ ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ದಾಂಡೇಲಿ ಸಿಪಿಐ ಬಿ.ಎಸ್.ಲೋಕಾಪುರ, ಜೋಯಿಡಾ ಸಿಪಿಐ ದಯಾನಂದ.ಎಸ್, ಪಿಎಸೈಗಳಾದ ಕಿರಣ್ ಪಾಟೀಲ್, ಯಲ್ಲಪ್ಪ.ಎಸ್, ಐ.ಆರ್.ಗಡ್ಡೇಕರ, ಯಲ್ಲಾಲಿಂಗ ಕುನ್ನೂರು, ಎಎಸೈಗಳು, ಪೊಲೀಸ್ ಸಿಬ್ಬಂದಿಗಳು, ನ್ಯಾಯಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರತಿದಿನ ಖಾಕಿಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುತ್ತಿದ್ದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಇಂದು ಬಿಳಿ ಬಣ್ಣದ ಆಕರ್ಷಕ ಟೀ ಶರ್ಟ್ ಧರಿಸಿ, ಸೈಕಲ್ ಏರಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮಾದಕ ದ್ರವ್ಯ ಸೇವನೆ ಮತ್ತು ಸಾಗಾಣಿಕೆ ವಿರೋಧಿ ಜಾಗೃತಿಯನ್ನು ಮೂಡಿಸಿ ಗಮನ ಸೆಳೆದರು.