ದಾಂಡೇಲಿ: ನಗರದ ಅಂಬೇವಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎ ಪ್ರಥಮ ವರ್ಷದ ಎನ್‌ಸಿಸಿ ಕೆಡೆಟ್ ಮೇಘಾ ಕದಂ, ೨೯ ಕರ್ನಾಟಕ ಎನ್‌ಸಿಸಿ ಬಟಾಲಿಯನ್ ಆಯೋಜಿಸಿದ್ದ ರಾಜ್ಯ ಮಟ್ಟದ ಫೈರಿಂಗ್ ಸ್ಪರ್ಧೆಯಲ್ಲಿ ಬೆಸ್ಟ್ ಫೈರರ್ ಬಹುಮಾನದ ಜೊತೆಗೆ ಬಂಗಾರದ ಪದಕದ ಗೌರವಕ್ಕೆ ಪಾತ್ರಳಾಗಿದ್ದಾಳೆ.
ಆ ಮೂಲಕ ಕಾಲೇಜು, ತಾಲೂಕು ಹಾಗೂ ಜಿಲ್ಲೆಯ ಘನತೆ- ಗೌರವಗಳನ್ನು ಹೆಚ್ಚಿಸಿದ್ದಾಳೆ. ಈಕೆಯ ಸಾಧನೆಗೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆದ ಶಾಸಕ ಆರ್.ವಿ.ದೇಶಪಾಂಡೆ, ಪ್ರಾಂಶುಪಾಲ ಡಾ.ಎಂ.ಡಿ.ಒಕ್ಕೂಟದ, ಎನ್‌ಸಿಸಿ ಅಧಿಕಾರಿ ಡಾ.ನಾಸೀರ್ ಅಹ್ಮದ್ ಜಂಗೂಭಾಯಿ, ತಾಲೂಕಾ ಹಿಂದುಳಿದ ವರ್ಗಗಳ ಅಧಿಕಾರಿ ಎಚ್.ಎಸ್.ಕುಸುಗಲ್ ಹಾಗೂ ವಸತಿ ನಿಲಯದ ವಾರ್ಡನ್ ಚಿದಾನಂದ ಚಿಕ್ಕೊಪ್ಪ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಶಾಸಕ ದೇಶಪಾಂಡೆ ಸಾಧನೆಗೈದ ವಿದ್ಯಾರ್ಥಿನಿಯನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿದ್ದಾರೆ.