ಹೊನ್ನಾವರ: ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್‌ನಲ್ಲಿ ತಾಲೂಕ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಸರ್ಕಾರಿ ಅಭಿಯೋಜನಾ ಇಲಾಖೆಯು ಜಂಟಿಯಾಗಿ ವಿಶ್ವ ಕಾರ್ಮಿಕ ಪದ್ಧತಿ ವಿರೋಧಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಕಾರ್ಯಕ್ರಮವನ್ನು ಜೆಎಂಎಫ್‌ಸಿ ಹಾಗೂ ಸಿವಿಲ್ ಜಡ್ಜ್ ಕಿರಿಯ ವಿಭಾಗದ ನ್ಯಾಯಾಧೀಶ ಚಂದ್ರಶೇಖರ ಬಣಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು. ಬಡತನ ಹಾಗೂ ಅನಕ್ಷರತೆಯ ಕಾರಣದಿಂದ ಬಾಲ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುತ್ತಿದ್ದರು. ಆದರೆ ಇದೀಗ ನಿಯಂತ್ರಣದಲ್ಲಿದ್ದು, ಸಾರ್ವಜನಿಕರು ಈ ಬಗ್ಗೆ ಜಾಗೃತಿ ವಹಿಸಬೇಕು. ಸರ್ಕಾರ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ಶಿಕ್ಷಣ ಪಡೆದು ಸಮಾಜಕ್ಕೆ ಮಾದರಿ ವ್ಯಕ್ತಿಯಾಗಿ ಬಾಳಬೇಕು. ಬಾಲಕಾರ್ಮಿಕ ಪದ್ಧತಿ ಸಂಪೂರ್ಣ ತೊಲಗಲು ಎಲ್ಲರ ಸಹಕಾರ ಅಗತ್ಯ ಎಂದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಅಕ್ಬರ್ ಹಬೀಬ್ ಸಾಬ್ ಮುಲ್ಲಾ ಮಾತನಾಡಿ, ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಮಾಡಲು ನಾವೆಲ್ಲರೂ ಪಣ ತೊಡೋಣ. ಬಾಲ್ಯದಲ್ಲಿ ಕೆಲಸಕ್ಕಿಂತ ಶಿಕ್ಷಣ ನೀಡುವ ಮೂಲಕ ಭವಿಷ್ಯದ ಜೀವನ ಭದ್ರತೆಗೆ ಅಣಿಯಾಗೋಣ ಎಂದರು.
ಶಾಲಾ ಮುಖ್ಯಾಧ್ಯಾಪಕ ಜಯಂತ್ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಸರ್ಕಾರಿ ವಕೀಲರಾದ ಸಂಪದಾ ಗುಣಗಾ, ಹೆಚ್ಚುವರಿ ಸರ್ಕಾರಿ ವಕೀಲ ವೆಂಕಟೇಶ ಗೌಡ, ವಕೀಲರ ಸಂಘದ ಅಧ್ಯಕ್ಷ ಜಿ.ಎ.ಭಟ್, ಕಾರ್ಮಿಕ ನಿರೀಕ್ಷಕ ಗುರುಪ್ರಸಾದ ನಾಯ್ಕ, ಸರ್ಕಾರಿ ವಕೀಲರಾದ ಪ್ರಮೋದ ಭಟ್, ಯೋಜನಾ ನಿರ್ದೇಶಕ ಸುರೇಶ ಗಾವಂಕರ್, ಪೊಲೀಸ್ ನಿರೀಕ್ಷಕ ಮಹಾಂತೇಶ ನಾಯಕ ಉಪಸ್ಥಿತರಿದ್ದರು.