• first
  second
  third
  previous arrow
  next arrow
 • ಐಆರ್‌ಬಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರೂಪಾಲಿ: ಕಟ್ಟುನಿಟ್ಟಿನ ಸೂಚನೆ

  300x250 AD

  ಕಾರವಾರ: ತಾಲೂಕಿನ ಚೆಂಡಿಯಾ, ಅರಗಾ ಮತ್ತಿತರ ಕಡೆ ಜಲಾವೃತವಾಗಿ ಜನತೆಗೆ ತೊಂದರೆಯಾಗುವುದನ್ನು ಮನಗಂಡು ಶಾಸಕಿ ರೂಪಾಲಿ ಎಸ್.ನಾಯ್ಕ ಬುಧವಾರ ಸ್ಥಳಕ್ಕೆ ತೆರಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಐಆರ್‌ಬಿ ಕಂಪನಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಸರಾಗವಾಗಿ ನೀರು ಹರಿದುಹೋಗುವಂತೆ ಶೀಘ್ರದಲ್ಲಿ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.

  ತಾಲ್ಲೂಕಿನ ಚೆಂಡಿಯಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಅರಗಾ, ಚೆಂಡಿಯಾ ಗ್ರಾಮದ ಸ್ಥಳಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೋಗವಿರ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು. ಮುಂದಾಲೋಚನೆ ಇಲ್ಲದ ವಿವಿಧ ಕಾಮಗಾರಿಗಳಿಂದ ಗುಡ್ಡದ ಮೇಲಿನಿಂದ ಹರಿದುಬರುವ ನೀರು ಸರಾಗವಾಗಿ ಸಮುದ್ರಕ್ಕೆ ಹರಿದುಹೋಗದಂತಾಗಿದೆ. ಇದರಿಂದ ಜನತೆ ತೊಂದರೆಗೊಳಗಾಗಿದ್ದಾರೆ. ಯಾವುದೇ ಕಾರಣಕ್ಕೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸರಾಗವಾಗಿ ನೀರು ಸಮುದ್ರಕ್ಕೆ ಹರಿದುಹೋಗಬೇಕು. ನಿಮ್ಮ ಕಾಮಗಾರಿಗಳಿಂದ ಜನತೆ ಯಾಕೆ ತೊಂದರೆ ಅನುಭವಿಸಬೇಕು. ಸ್ಥಳೀಯರಿಗೆ ತೊಂದರೆ ಆಗುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಶಾಸಕಿ ಕೆಂಡಾಮಂಡಲರಾದರು.

  ಗಣಪತಿ ವಿಸರ್ಜನೆಗೂ ಸಮಸ್ಯೆ ಆದಾಗ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದೆ. ನಂತರ ಸಚಿವರಿಂದ ಆದೇಶ ಬಂದ ಮೇಲೆ ಕಾಮಗಾರಿ ನಡೆಸಲು ಒಪ್ಪಿದ್ದಾರೆ. ಹಿಂದೆ ತಾವು ತಾಪಂ ಅಧ್ಯಕ್ಷರಾಗಿದ್ದಾಗ ನೌಕಾನೆಲೆ ಕಾಮಗಾರಿಯಿಂದ ನೀರು ತುಂಬುತ್ತಿತ್ತು. ನಂತರ ನಾನು ಖುದ್ದಾಗಿ ತೆರಳಿ ಪರಿಶೀಲಿಸಿ ಮನವರಿಕೆ ಮಾಡಿಕೊಟ್ಟಿದ್ದರಿಂದ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡಲಾಯಿತು. ಈಗ ಮತ್ತೆ ಈ ಪ್ರದೇಶದ ಜನತೆ ಬವಣೆ ಅನುಭವಿಸುವಂತಾಗಿದೆ. ಪ್ರತಿ ಮಳೆಗಾಲದಲ್ಲೂ ಜನತೆ ತೊಂದರೆ ಅನುಭವಿಸಬೇಕು ಅಂದರೆ ಏನು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

  ನಿರಾಶ್ರಿತರು ಇಲ್ಲಿ ಬಂದು ಮನೆ ಕಟ್ಟಿಕೊಂಡಿದ್ದಾರೆ. ಅವರು ಮೊದಲೇ ತೊಂದರೆಯಲ್ಲಿದ್ದಾರೆ. ಇಂತಹ ಬಡ ಜನತೆಗೆ ಏಕೆ ತೊಂದರೆ ಕೊಡುತ್ತೀರಿ. ಐಆರ್‌ಬಿ ಇಷ್ಟು ದೊಡ್ಡ ಕಂಪನಿ ಎಂದು ಹೇಳಿಕೊಳ್ಳುತ್ತೀರಿ. ಆದರೆ ಏಕೆ ಹೀಗೆ ಮಾಡುತ್ತೀರಿ. ನನ್ನ ಕ್ಷೇತ್ರದ ಜನರಿಗೆ ತೊಂದರೆ ಆಗುವುದನ್ನು ಯಾವುದೆ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಇಲ್ಲಿನ ಅವಾಂತರಗಳ ಬಗ್ಗೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆಯುತ್ತೇನೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

  ಈ ಹಿಂದಿನ ರಸ್ತೆ ಇದ್ದಾಗ ನೀರು ತುಂಬುತ್ತಿರಲಿಲ್ಲ. ಈಗ ಯಾಕೆ ತುಂಬುತ್ತಿದೆ. ಇಂತಹ ರಸ್ತೆ ಮಾಡಿ ಏನು ಪ್ರಯೋಜನ. ಜನರಿಗೆ ತೊಂದರೆ ಉಂಟುಮಾಡುವುದಾದರೆ ರಸ್ತೆಯೇ ಬೇಡ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೇವಲ ಎರಡೇ ಎರಡು ಮಳೆಗೆ ನೀರು ನಿಂತು ಇಷ್ಟೊಂದು ಸಮಸ್ಯೆ ಆಗಿದೆ. ಮಳೆಗಾಲ ಮುಂದೆ ೩-೪ ತಿಂಗಳು ಇದೆ. ಜನತೆ ಹೇಗೆ ಕಳೆಯಬೇಕು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಗುಡ್ಡದ ಮೇಲಿನಿಂದ ದೊಡ್ಡ ಹಳ್ಳದಲ್ಲಿ ನೀರು ಬರುತ್ತಿದೆ. ಮಳೆ ಬಂದಾಗ ಎಷ್ಟು ಪ್ರಮಾಣದಲ್ಲಿ ನೀರು ಬರುತ್ತದೆ ಎನ್ನುವುದನ್ನು ದೊಡ್ಡ ಹಳ್ಳದ ನೀರು ಹರಿದುಹೋಗುವಂತೆ ಮಾಡಬೇಕು. ಗುಡ್ಡದ ಮೇಲಿನಿಂದ ಬರುವ ನೀರು ಎಷ್ಟು ಪ್ರಮಾಣದಲ್ಲಿ ಬರಲಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದರು.

  300x250 AD

  ರಸ್ತೆ ಪಕ್ಕದ ಮನೆಗಳಿಗೆ ನೀರು ನುಗ್ಗಿದೆ. ಚರಂಡಿಯನ್ನು ನಿರ್ಮಾಣ ಮಾಡಿ ನೀರು ಹೋಗಲು ಅನುಕೂಲ ಕಲ್ಪಿಸಬೇಕು. ಐದು ದಿನಗಳ ಒಳಗಾಗಿ ಎಲ್ಲವನ್ನು ಸರಿ ಪಡಿಸಬೇಕು ಇಲ್ಲದಿದ್ದರೆ ನಿಮ್ಮ ಕಚೇರಿಗೆ ಜನರು ಮುತ್ತಿಗೆ ಹಾಕುತ್ತಾರೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಐಆರ್‌ಬಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

  ಈ ಸಂದರ್ಭದಲ್ಲಿ ತಹಶೀಲ್ದಾರ ಎನ್.ಎಫ್.ನರೋನ, ಗ್ರಾಮ ಪಂಚಾಯತಿ ಅಧ್ಯಕ್ಷ ಜಿತೇಶ್ ಅರ್ಗೇಕರ, ಉಪಾಧ್ಯಕ್ಷೆ ಕಲ್ಪನಾ ನಾಯ್ಕ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧೀಕ್ಷಕ ಎಂಜಿನಿಯರ್ ನವೀನ್‌ಕುಮಾರ, ಐಆರ್‌ಬಿ ಕಂಪನಿಯ ಪ್ರತಿನಿಧಿಗಳಾದ ಪ್ರಮೋದ ಸಾವಲ್ಕರ, ಮನಿಷ ಹಾಗೂ ಸಾರ್ವಜನಿಕರು ಇದ್ದರು.

  ಕಟ್ಟುನಿಟ್ಟಿನ ಸೂಚನೆ: ಚೆಂಡಿಯಾ, ಅರಗಾ ಮತ್ತಿತರ ಕಡೆ ನೀರು ನುಗ್ಗಿ ಜನತೆಗೆ ತೊಂದರೆ ಆಗುವುದನ್ನು ಮನಗಂಡ ಶಾಸಕಿ ರೂಪಾಲಿ ಎಸ್.ನಾಯ್ಕ, ಮಂಗಳವಾರ ಸಂಜೆಯೂ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಅಧಿಕಾರಿಗಳ ಜತೆ ಮಾತುಕತೆ ನಡೆಸಿ ತಕ್ಷಣ ನೀರು ಹರಿದುಹೋಗುವಂತೆ ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಬುಧವಾರ ಮತ್ತೆ ತೆರಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸ್ಥಳೀಯ ಜನತೆಯ ಯಾವುದೆ ಕಾರಣಕ್ಕೂ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

  Share This
  300x250 AD
  300x250 AD
  300x250 AD
  Back to top