ಕಾರವಾರ: ಜಿಲ್ಲೆಯಲ್ಲಿ ಆರಂಭಿಸಲು ಉದ್ದೇಶಿಸಲಾದ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಗೆ ಬ್ರಿಟೀಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ನಮ್ಮ ಕಾರವಾರದ ಹೆಮ್ಮೆಯ ಪುತ್ರ ಹೆಂಜಾ ನಾಯ್ಕ ಅವರ ಹೆಸರನ್ನು ನಾಮಕರಣ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಪ್ರಯತ್ನದಿಂದ ಸರ್ಕಾರ ಆದೇಶ ಹೊರಡಿಸಿದೆ. ಇದು ಅತ್ಯಂತ ಹರ್ಷದಾಯಕ ಸಂಗತಿ ಎಂದು ಶಾಸಕಿ ರೂಪಾಲಿ ಎಸ್.ನಾಯ್ಕ ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಭಾರತೀಯ ಸೇನೆ ಹಾಗೂ ಇತರೆ ಯುನಿಫಾರ್ಮ ಸೇವೆಗಳಿಗೆ ಸೇರ ಬಯಸುವ ಹಿಂದುಳಿದ ವರ್ಗಗಳ ಹಾಗೂ ಪರಿಶಿಷ್ಟ ಜಾತಿಯ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿಯನ್ನು ಉಚಿತ ಊಟ ಮತ್ತು ವಸತಿಯೊಂದಿಗೆ ಈ ಶಾಲೆಯಲ್ಲಿ ನೀಡಲು ಉದ್ದೇಶಿಸಲಾಗಿದೆ.
ವೀರ ಯೋಧ ಹೆಂಜಾ ನಾಯ್ಕ ಹೆಸರನ್ನು ಈಗಾಗಲೆ ಕಾರವಾರ ಕೋಡಿಬಾಗ ರಸ್ತೆಗೆ ನಾಮಕರಣ ಮಾಡಲು ಸರ್ಕಾರ ಸಮ್ಮತಿಸಿ ಅದೇಶ ಮಾಡಿದೆ. ಈಗ ಹೆಂಜಾ ನಾಯ್ಕ ಹೆಸರಿನಲ್ಲಿ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ ಆರಂಭಿಸಲು ಉದ್ದೇಶಿಸಿರುವುದು ಹೆಂಜಾ ನಾಯ್ಕ ಅವರಿಗೆ ಸಲ್ಲಿಸುವ ಗೌರವದ ಜತೆಗೆ ನಮ್ಮ ಕ್ಷೇತ್ರದ ಜನತೆಗೂ ಸಂತಸಕ್ಕೆ ಕಾರಣವಾಗಿದೆ.
ಹೆಂಜಾ ನಾಯ್ಕ ಅವರು ನಮ್ಮೆಲ್ಲರ ಹೆಮ್ಮೆ. ಶೌರ್ಯ, ಕೆಚ್ಚೆದೆಯಿಂದ ಬ್ರಿಟೀಷರ ವಿರುದ್ಧ ಸೆಣಸಿದ ಅವರ ಹೆಸರನ್ನು ಈ ಶಾಲೆಗೆ ನಾಮಕರಣ ಮಾಡಿದ್ದು ಅತ್ಯಂತ ಸೂಕ್ತ ನಿರ್ಧಾರವಾಗಿದೆ. ಇದು ಅ ಶಾಲೆಯಲ್ಲಿ ಕಲಿಯುವವರಿಗೂ ಸ್ಫೂರ್ತಿಯನ್ನು ನೀಡಲಿದೆ. ಕಾರವಾರ ಕೋಡಿಬಾಗ ರಸ್ತೆಗೆ ಹೆಂಜಾ ನಾಯ್ಕ ಹೆಸರು ನಾಮಕರಣ ಮಾಡುವಲ್ಲಿ ಹಾಗೂ ಈ ತರಬೇತಿ ಶಾಲೆಯನ್ನು ಹೆಂಜಾ ನಾಯ್ಕ ಹೆಸರಿನಲ್ಲಿ ಆರಂಭಿಸಲು ಅತ್ಯಂತ ಮುತುವರ್ಜಿಯಿಂದ ಸರ್ಕಾರಿ ಆದೇಶ ಆಗುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ನೋಡಿಕೊಂಡಿದ್ದಾರೆ. ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಈ ಆದೇಶ ಹೊರಡಿಸಲು ಕಾರಣರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಂಬಂಧಪಟ್ಟ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುವುದಾಗಿ ರೂಪಾಲಿ ಎಸ್.ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.