ಭಟ್ಕಳ: ಅಶೋಕ ಲೇಲ್ಯಾಂಡ್ ವಾಹನವೊಂದು ಚಲಿಸುತ್ತಿದ್ದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮಾರುತಿ ಶೋ ರೂಮ್ ಸಮೀಪ ನಡೆದಿದೆ. ಮೃತ ಬೈಕ್ ಸವಾರನನ್ನು ಬೆಳಗಾಂ ಮೂಲದ ಚಿಕ್ಕೋಡಿ ನಿವಾಸಿ ರಾಜೇಂದ್ರ ಯಕ್ಷಂಬೆ ಎಂದು ತಿಳಿದು ಬಂದಿದೆ.
ಈತ ಕುಂದಾಪುರ ಕಡೆಯಿಂದ ಭಟ್ಕಳ ಕಡೆ ಬರುವ ವೇಳೆಯಲ್ಲಿ ಇಲ್ಲಿನ ಹೆದ್ದಾರಿ 66ರ ಮಾರುತಿ ಶೋ ರೂಮ್ ಸಮೀಪ ಅಶೋಕ ಲೈಲ್ಯಾಂಡ್ ವಾಹನವೊಂದು ಅತಿ ವೇಗ ಹಾಗೂ ಅಜಾಗರುಕತೆಯಿಂದ ಬಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ಬೈಕ್ ಸವಾರ ರಸ್ತೆ ಮೇಲೆ ಬಿದ್ದಿದ್ದು, ಅಪಘಾತದಲ್ಲಿ ಬೈಕ್ ಸವಾರನ ತಲೆ ಹಾಗೂ ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ತಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಆಸ್ಪತ್ರೆಗೆ ತಲುಪುವ ವೇಳೆ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.