ಭಟ್ಕಳ: ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವಂತೆ ಆಗ್ರಹಿಸಿ ಮೊಗೇರ ಸಮಾಜದ ಧರಣಿ ಮುಂದುವರೆದಿದ್ದು, ಹೋರಾಟದ ಭಾಗವಾಗಿ ಮೊಗೇರ ಸಮಾಜದ ಶಾಲಾ ಕಾಲೇಜು ವಿದ್ಯಾರ್ಥಿಗಳು ತರಗತಿಗೆ ಗೈರಾಗಿ ಮಳೆಯನ್ನೂ ಲೆಕ್ಕಿಸದೇ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.ವ್ಯಾಸಂಗಕ್ಕೆ ಅವಶ್ಯವಿರುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಮುಂದುವರಿಸಬೇಕೆಂದು ಆಗ್ರಹಿಸಿ ಉಪವಿಭಾಗಾಧಿಕಾರಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡದ ಕಾರಣ ಶಾಲಾ- ಕಾಲೇಜು ವಿದ್ಯಾಭ್ಯಾಸಕ್ಕೆ ಪೂರಕವಾದ ಶಿಷ್ಯವೇತನ, ಸರಕಾರ ವಸತಿ ಸೌಲಭ್ಯ, ಉನ್ನತ ವ್ಯಾಸಂಗಕ್ಕೆ ಶಾಲಾ ಕಾಲೇಜುಗಳ ಆಯ್ಕೆ ಮುಂತಾದವುಗಳಿಗೆ ತೊಡಕಾಗಿದ್ದು, ಜಿಲ್ಲಾಡಳಿತದಿಂದ ಅನ್ಯಾಯವಾಗಿದೆ. ತಂದೆ-ತಾಯಿಗಳು, ಅಜ್ಜ- ಅಜ್ಜಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪಡೆದಿದ್ದು, ನಮಗೆ ಯಾವುದೇ ಕಾರಣ ನೀಡದೇ ನ್ಯಾಯಾಲಯ ಮತ್ತು ಸರ್ಕಾರಿ ಆದೇಶವಿದ್ದರೂ ಪ್ರಮಾಣ ಪತ್ರ ನೀಡದೆ ಶಾಲಾ ಕಾಲೇಜುಗಳ ಪ್ರವೇಶಕ್ಕೆ ಸಮಸ್ಯೆಯಾಗುತ್ತಿದೆ ಎಂದು ಸಮವಸ್ತ್ರಗಳಲ್ಲಿ ಸ್ವಯಂ ಪ್ರೇರಿತವಾಗಿ ತರಗತಿಗಳಿಗೆ ಗೈರಾಗಿ ವಿದ್ಯಾರ್ಥಿಗಳು ಸರಕಾರದ ಕ್ರಮವನ್ನು ಖಂಡಿಸಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಒಂದು ವೇಳೆ ಶೀಘ್ರವಾಗಿ ನ್ಯಾಯ ಒದಗಿಸಿಕೊಡದೇ ಹೋದಲ್ಲಿ ಮುಂದಿನ ದಿನಗಳಲ್ಲಿ ತರಗತಿ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ಸುಮಾರು 500 ವಿದ್ಯಾರ್ಥಿಗಳು ಸಂಶುದ್ದೀನ್ ಸರ್ಕಲ್ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ತೆರಳಿ, ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ ಅವರಿಗೆ ಮನವಿ ಸಲ್ಲಿಸಿದರು.ನಂತರ ಅಲ್ಲಿಂದ ವಾಪಸ್ ಸಂಶುದ್ದೀನ್ ಸರ್ಕಲ್ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ಬರುವಾಗ ಪಿಎಲ್‌ಡಿ ಬ್ಯಾಂಕ್ ಬಳಿ ರಸ್ತೆ ತಡೆ ಮಾಡಿ 15 ನಿಮಿಷಗಳ ಕಾಲ ಪ್ರತಿಭಟಿಸಿದರು. ಈ ವೇಳೆ ಪೊಲೀಸ್ ಮಧ್ಯಸ್ಥಿಕೆಯಲ್ಲಿ ವಿದ್ಯಾರ್ಥಿಗಳನ್ನು ಹಾಗೂ ಅವರ ಪಾಲಕರನ್ನು ಸಮಾಧಾನಪಡಿಸಿ ರಸ್ತೆ ತಡೆಯನ್ನು ಹಿಂಪಡೆಯಲಾಯಿತು.
ಡಿಸಿಗಾಗಿ ಕಾದ ವಿದ್ಯಾರ್ಥಿಗಳು: ಉಪವಿಭಾಗಾಧಿಕಾರಿ ಕಚೇರಿಗೆ ಬಂದ ವಿದ್ಯಾರ್ಥಿಗಳ ಮನವಿಯನ್ನು ತಹಸೀಲ್ದಾರ ಸುಮಂತ್ ಅವರು ಸ್ವೀಕರಿಸಲು ಮುಂದಾದಾಗ ಮನವಿಯನ್ನು ಖುದ್ದಾಗಿ ಜಿಲ್ಲಾಧಿಕಾರಿಗಳೇ ಪಡೆಯಬೇಕೆಂದು ಒಂದು ಘಂಟೆಗಳ ಕಾಲ ವಿದ್ಯಾರ್ಥಿಗಳು ಕಾಯುತ್ತ ನಿಂತರು. ಮನವಿಯನ್ನು ಬೇಗ ಕೊಡಿ ಎಂದಿದ್ದಕ್ಕೆ ಮಾಜಿ ಶಾಸಕ ಮಂಕಾಳ ವೈದ್ಯ ಸ್ಥಳಕ್ಕಾಗಮಿಸಿ ತಹಶೀಲ್ದಾರರೊಂದಿಗೆ ವಾಗ್ವಾದಕ್ಕಿಳಿದರು.ನಂತರ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿದ್ದರಿಂದ ಒಂದು ಗಂಟೆಗಳ ಬಳಿಕ ಉಪವಿಭಾಗಾಧಿಕಾರಿ ಮಮತಾದೇವಿ ಅವರಿಗೆ ಪ್ರತಿಭಟನಾಕಾರು ಮನವಿ ಸಲ್ಲಿಸಿದರು.