• Slide
  Slide
  Slide
  previous arrow
  next arrow
 • ಅಣಲಗಾರ ದೇವಸ್ಥಾನದಲ್ಲಿ ಅಷ್ಟಬಂಧ-ಪ್ರತಿಷ್ಠಾಪನಾ ಮಹೋತ್ಸವ

  300x250 AD

  ಯಲ್ಲಾಪುರ : ತಾಲೂಕಿನ ನಂದೊಳ್ಳಿ ಗ್ರಾ.ಪಂ. ವ್ಯಾಪ್ತಿಯ ಪುರಾತನವಾದ ಅಣಲಗಾರ ಗೋಪಾಲಕೃಷ್ಣ ದೇವಾಲಯವು ಅತ್ಯಂತ ಜಾಗ್ರತ ಕ್ಷೇತ್ರವಾಗಿದ್ದು, ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿದೆ. ದೇವಸ್ಥಾನದಲ್ಲಿ ಅಷ್ಟಬಂಧ-ಪ್ರತಿಷ್ಠಾಪನಾ ಮಹೋತ್ಸವ ಜೂ.22 ಹಾಗೂ 23 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
  ಇಲ್ಲಿ ವರ್ಷಂಪ್ರತಿ ನಡೆಯುವ ಲಕ್ಷ ತುಳಸಿ ಅರ್ಚನೆ, ಕೃಷ್ಣಾಷ್ಟಮಿ ಪೂಜೆ, ಮಕರ ಸಂಕ್ರಮಣ ಉತ್ಸವ, ಯುಗಾದಿ ಉತ್ಸವ, ದೇವಾಲಯದ ವರ್ಧಂತಿ ಉತ್ಸವ ಇತ್ಯಾದಿ ಆಚರಣೆ ವೇಳೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ.
  ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ : ಅಣಲಗಾರ ಗೋಪಾಲಕೃಷ್ಣ ದೇವಾಲಯಕ್ಕೆ ಹಾಗೂ ಕಲಾರಾಧನೆಗೆ ನಿಕಟ ಸಂಬಂಧವಿದೆ. ನೂರಾರು ವರ್ಷಗಳಿಂದ ಈ ದೇವಾಲಯವು ಯಕ್ಷ ಗಾನ, ತಾಳಮದ್ದಳೆ ಸೇರಿದಂತೆ ವಿವಿಧ ಕಲೆಗಳನ್ನು ಪೋಷಿಸುತ್ತ ಬಂದಿದೆ. ತಾಲೂಕಿನಲ್ಲಿಯೇ ಪ್ರಪ್ರಥಮ ಎನ್ನಲಾದ ಯಕ್ಷ ಗಾನ ಮೇಳವೊಂದು ಈ ದೇವಾಲಯದಿಂದಲೇ ಆರಂಭವಾದ ಇತಿಹಾಸವಾಗಿದೆ. ಶ್ರೀಗೋಪಾಲಕೃಷ್ಣ ಪ್ರಾಸಾದಿತ ಯಕ್ಷ ಗಾನ ಮಂಡಳಿ ಅಣಲಗಾರ ಎಂಬ ಹೆಸರಿನಿಂದ ಪ್ರಸಿದ್ಧಿಗೆ ಬಂದ ಈ ಮಂಡಳಿಯ ವಾರ್ಷಿಕ ಸೇವೆಯ ಆಟ ಇಂದೂ ಮುಂದುವರಿದಿದೆ. ಈ ಮೇಳಕ್ಕೆ ಮುನ್ನೂರು ವರ್ಷಗಳ ಇತಿಹಾಸವಿದೆ. ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಬಹುತೇಕ ಎಲ್ಲ ಮೇರು ಕಲಾವಿದರೂ ಇಲ್ಲಿಗೆ ಬಂದು ಕಲಾ ಸೇವೆ ನೀಡಿರುವ ಹೆಗ್ಗಳಿಕೆ ಇದೆ.

  ಪೌರಾಣಿಕ ಹಿನ್ನೆಲೆ : ಪುರಾತನವಾದ ಈ ದೇವಾಲಯಕ್ಕೆ ಪೌರಾಣಿಕ ಹಿನ್ನೆಲೆ ಇದೆ. ಸಾವಿರಾರು ವರ್ಷಗಳ ಹಿಂದೆ ತಪಸ್ವಿಯೊಬ್ಬ ತನಗೆ ಒಲಿದ ಕೃಷ್ಣನ ವಿಗ್ರಹವನ್ನು ಎತ್ತಿಕೊಂಡು ದಟ್ಟಾರಣ್ಯದಲ್ಲಿ ಸಾಗುತ್ತಿದ್ದಾಗ ಆಯಾಸ ಉಂಟಾಗಿ ಮೂರ್ತಿಯನ್ನು ಅಣಲೆಮರದ ಬುಡದಲ್ಲಿಟ್ಟು ವಿಶ್ರಮಿಸುತ್ತಾನೆ. ಹೊರಡಬೇಕೆಂದಾಗ ವಿಗ್ರಹವನ್ನು ಸ್ಥಳದಿಂದ ಕದಲಿಸಲಾಗಲಿಲ್ಲ. ಆಗ ಮಹಾವಿಷ್ಣುವು ಮುನಿಯ ಕನಸಿನಲ್ಲಿ ಬಂದು, ಈ ಕ್ಷೇತ್ರವು ಪರಮ ಪಾವನ ಕ್ಷೇತ್ರವಾಗಿದ್ದು, ಗೋಪಾಲಕೃಷ್ಣನ ರೂಪದಲ್ಲಿ ನಾನು ಇಲ್ಲಿಯೇ ಇರುತ್ತೇನೆ ಎಂದಾಗ, ಇಲ್ಲಿಯೇ ವಿಗ್ರಹದ ಪ್ರತಿಷ್ಠಾಪನೆ ನಡೆಯುತ್ತದೆ. ನಂತರ ಗೋವುಗಳು ಬಂದು ವಿಗ್ರಹದ ಮೇಲೆ ಕ್ಷೀರಧಾರೆ ಹರಿಸಿದವು. ಹೀಗಾಗಿ ಅಣಲಗಾರ ಎಂಬ ಹೆಸರು ಬಂತು ಎಂಬ ಪ್ರತೀತಿ ಇದೆ.
  ನೂರಾರು ವರ್ಷಗಳ ಹಿಂದೆ ರಾಜನೊಬ್ಬ ಈ ದೇವಾಲಯದ ಮೇಲೆ ದಾಳಿ ಮಾಡಲು ಬಂದಾಗ, ಇದ್ದಕ್ಕಿದ್ದಂತೆ ಸೇನೆಯು ಮುಗ್ಗರಿಸಿ, ಆನೆಗಳು ನೆಲಕ್ಕುರುಳಿದಾಗ, ತನ್ನ ತಪ್ಪಿನ ಅರಿವಾಗಿ ಆ ರಾಜನು ಶ್ರೀದೇವರಿಗೆ ಪ್ರಾರ್ಥಿಸಿ, ಸೇನೆಯ ಆನೆಯ ಕುತ್ತಿಗೆಗೆ ಕಟ್ಟಲಾಗಿದ್ದ ಗಂಟೆಯನ್ನು ಬಿಚ್ಚಿ ದೇವರ ಎದುರಿನಲ್ಲಿ ಕಟ್ಟಿದಾಗ ಸೇನೆಯು ಮೇಲೆದ್ದಿತು ಎಂಬ ದಂತಕಥೆ ಇದೆ. ಇದರ ಕುರುಹಾಗಿ ದೊಡ್ಡದಾದ ಪುರಾತನ ಗಂಟೆಯೊಂದು ಇಂದಿಗೂ ದೇವರ ಎದುರಿನಲ್ಲಿ ನೇತಾಡುತ್ತಿದೆ. ಸೋದೆ ಅರಸರು, ಕದಂಬ ವಂಶದ ರಾಜರೂ ಸಹ ಈ ದೇವಾಲಯಕ್ಕೆ ನಡೆದುಕೊಳ್ಳುತ್ತಿದ್ದರು. ಜಮೀನುಗಳನ್ನು ಉಂಬಳಿಯಾಗಿ ನೀಡಿದ್ದರು. ಬಹು ಹಿಂದೆ ಈ ದೇವಾಲಯದಲ್ಲಿ ಗುರು ಪರಂಪರೆಯೂ ಇತ್ತು. ಈಗ ಇಲ್ಲ. ಆವಾರದಲ್ಲಿ ಗುರು ಮಂದಿರವಿದೆ. ದೇವಾಲಯದ ಗರ್ಭಗುಡಿ,ಗಂಟೆ ಮಂಟಪವು ಸಂಪೂರ್ಣ ಕಲ್ಲಿನಿಂದ ನಿರ್ಮಿತವಾಗಿದೆ.
  ಅಷ್ಟಬಂಧ ಮಹೋತ್ಸವ:ಅಣಲಗಾರ ಗೋಪಾಲಕೃಷ್ಣ ದೇವರ ಅಷ್ಟಬಂಧ ಪ್ರತಿಷ್ಠಾ ಮಹೋತ್ಸವ ಜೂ.22 ಹಾಗೂ 23 ರಂದು ನಡೆಯಲಿದೆ.ಗಜಾನನ ಭಟ್ಟ ಹಿರೇ ಅವರ ನೇತೃತ್ವದಲ್ಲಿ ಗಣೇಶಪೂಜೆ, ಋತ್ವಿಗರ್ವರ್ಣನ, ಮಧುಪರ್ಕಪೂಜೆ, ಶ್ರೀ ಸೂಕ್ತ, ಪುರುಷಸೂಕ್ತ ಪಾರಾಯಣ, ಗಣಹವನ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ರಾಕ್ಷೋಘ್ನ ಹವನ, ವಾಸ್ತು ಶಾಂತಿ, ಜೀರ್ಣಬಂಧ ವಿಸರ್ಜನೆ, ನೂತನ ಅಷ್ಟಬಂಧ ಲೇಪನ ನಡೆಯಲಿದೆ. ಸಂಜೆ 5 ಕ್ಕೆ ಸ್ವರ್ಣವಲ್ಲೀ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಆಗಮಿಸಲಿದ್ದು, ಅವರ ಪಾದಪೂಜೆ, ನಂತರ ಆಶೀರ್ವಚನ ಕಾರ್ಯಕ್ರಮ ನಡೆಯಲಿದೆ.
  ಜೂ.23 ರಂದು ಬೆಳಗ್ಗೆ ನವಗ್ರಹ, ಮೃತ್ಯುಂಜಯ, ಅಷ್ಟಬಂಧ ಶಾಂತಿ, ಶ್ರೀಸೂಕ್ತ, ಪುರುಷಸೂಕ್ತ ಹೋಮಗಳು, ಪೂರ್ಣಾಹುತಿ, ಪೂರ್ಣಕಲಾ ಸಾನ್ನಿಧ್ಯ, ಕಲಶಾಭಿಷೇಕ, ಅನ್ನ ಸಂತರ್ಪಣೆ ನಡೆಯಲಿದೆ. ರಾತ್ರಿ 9 ಕ್ಕೆ ತಾಲೂಕಿನ ಪ್ರಸಿದ್ಧ ಕಲಾವಿದರಿಂದ ತುಳಸಿ-ಜಲಂಧರ ಯಕ್ಷಗಾನ ಪ್ರದರ್ಶನ ನಡೆಯಲಿದೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top