ಕುಮಟಾ: ಕೊಂಕಣ ಎಜ್ಯುಕೇಶನ್ ಟ್ರಸ್ಟ್ನವರು ಏರ್ಪಡಿಸಿದ್ದ ಎಸ್.ಎಸ್. ಎಲ್.ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಶಿಕ್ಷಕರ ಅಭಿನಂದನಾ ಕಾರ್ಯಕ್ರಮವನ್ನು ಹುಬ್ಬಳ್ಳಿಯ ಶ್ರೀಮಾತಾ ಆಶ್ರಮದ ಮಾತಾಜಿ ತೇಜೋಮಯಿ ಉದ್ಘಾಟಿಸಿ ಮಾತನಾಡಿದರು.
ನಂತರ ಮಾತನಾಡಿದ ಅವರು,ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುವುದರೊಟ್ಟಿಗೆ ಒಳ್ಳೆಯ ಚಾರಿತ್ಯ ನಿರ್ಮಾಣ ಮಾಡಿಕೊಂಡು ದೇಶಭಕ್ತರಾಗಬೇಕು. ಆಗಲೇ ಜೀವನ ಸಾರ್ಥಕ ಎಂದು ನುಡಿದರು.
ಕಾರವಾರದ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಭವೇಶಾನಂದ ಸ್ವಾಮೀಜಿಯವರು ಮಾತನಾಡಿ, ಕೊಂಕಣ ಎಂಬುದು ಸರಸ್ವತಿಯ ವಿದ್ಯಾಲಯ.ಇಲ್ಲಿ ಅಭ್ಯಾಸ ಮಾಡುವವರು ಭಾಗ್ಯವಂತರು. ಈ ತಮ್ಮ ಸಾಧನೆ ವಿದ್ಯಾರ್ಥಿ ಜೀವನದ ಮೊದಲ ಗುರುತರ ಹೆಜ್ಜೆ, ಸಂಸ್ಕಾರಯುತ ಶಿಕ್ಷಣದಿಂದ ಜೀವನದ ಹಂತ-ಹಂತದಲ್ಲಿಯೂ ಸಾಧನೆ ಮಾಡುವ ನಿಟ್ಟಿನಲ್ಲಿ ಮಕ್ಕಳನ್ನು ರೂಪಿಸುತ್ತಿರುವ ಕೊಂಕಣ ಸಂಸ್ಥೆಗೆ ಶ್ರೇಯಸ್ಸಾಗಲಿ, ಸಮಾಜಕ್ಕೆ ಆದರ್ಶವಾಗಲಿ ಎಂದು ಆಶೀರ್ವದಿಸಿದರು.
ನಿವೃತ್ತ ಡಿಡಿಪಿಐ ಕಾರವಾರ ಹರೀಶ ಗಾಂವಕರ ಇವರು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ 625ಕ್ಕೆ 625 ಅಂಕಗಳೊಂದಿಗೆ ರಾಜ್ಯಮಟ್ಟದಲ್ಲಿ ಪ್ರಥಮ ರ್ಯಾಂಕ್ ಪಡೆದ ದೀಕ್ಷಾ ಪಾಂಡುರಂಗ ನಾಯ್ಕ ,ಕಾರ್ತಿಕ ಭಟ್ಟ ಹಾಗೂ ಮೇಘನಾ ವಿಷ್ಣುಭಟ್ಟ ಇವರುಗಳಿಗೆ ತಲಾ ರೂ. 25, 000/-, ರಾಜ್ಯಮಟ್ಟದ ಟಾಪ್ 10 ರ್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದ ಇತರ 29 ವಿದ್ಯಾರ್ಥಿಗಳಿಗೆ ತಲಾ ರೂ. 10, 000/-, ಅಲ್ಲದೇ ಉಳಿದ ಸಾಧಕ ವಿದ್ಯಾರ್ಥಿಗಳೊಳಗೂಡಿ ಸರಿಸುಮಾರು ಐದು ಲಕ್ಷ ರೂ.ಗಳನ್ನು ಕೊಂಕಣ ಸಂಸ್ಥೆಯು ಪುರಸ್ಕಾರ ರೂಪದಲ್ಲಿ ನೀಡಿ ಗೌರವಿಸಿದೆ. ಪ್ರತಿವರ್ಷದಂತೆ ವಿದ್ಯಾರ್ಥಿಗಳ ಸಾಧನೆಗೆ ಕಾರಣೀಭೂತರಾದ ಶಿಕ್ಷಕವೃಂದವನ್ನೂ ಸಂಸ್ಥೆ ಗೌರವಿಸಿ ತನ್ನ ಘನತೆ ಹೆಚ್ಚಿಸಿಕೊಂಡಿದೆ. ಶಾಲೆಯ ಪೂರ್ವ ವಿದ್ಯಾರ್ಥಿನಿ ಡಾ. ದೀಕ್ಷಾ ಪಿ. ಭಟ್ಟ ಎಂ.ಬಿ.ಬಿ.ಎಸ್., ಎಂ.ಎಸ್., ಓ.ಬಿ.ಜಿ. ಇವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿ, ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ವಿಠಲ ನಾಯಕ ಮಾತನಾಡಿದರು.
ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಮೇಘನಾ ಭಟ್ಟ, ಶಿಕ್ಷಕರ ಪರವಾಗಿ ಶಿಕ್ಷಕ ಶಿವಾನಂದ ಭಟ್ಟ ಅನಿಸಿಕೆ ವ್ಯಕ್ತಪಡಿಸಿದರು. ಸಂಸ್ಥೆಯ ವಿಶ್ವಸ್ಥರಾದ ರಮೇಶ ಪ್ರಭು ಸ್ವಾಗತಿಸಿದರು. ಕಾರ್ಯದರ್ಶಿಗಳಾದ ಮುರಳೀಧರ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿದರು.ಸಂಸ್ಥೆಯ ವಿಶ್ವಸ್ಥರಾದ ಎನ್.ಬಿ.ಶಾನಭಾಗ, ಡಿ.ಡಿ.ಕಾಮತ, ಶೈಕ್ಷಣಿಕ ಸಲಹೆಗಾರರಾದ ಬಿ.ಎಸ್. ಗೌಡ, ಅಂಗ ಸಂಸ್ಥೆಗಳ ಮುಖ್ಯಸ್ಥರುಗಳಾದ ಸುಮಾ ಪ್ರಭು, ಸುಜಾತಾ ನಾಯ್ಕ, ಸಾವಿತ್ರಿ ಹೆಗಡೆ, ಕಿರಣ ಭಟ್ಟ ಉಪಸ್ಥಿತರಿದ್ದರು. ಭೂಮಿಕಾ ಭಟ್ಟ ಸಂಗಡಿಗರು ಪ್ರಾರ್ಥಿಸಿದರು. ಡಿ. ಡಿ. ಕಾಮತ ವಂದಿಸಿದರು.ಶಿಕ್ಷಕ ಪ್ರಕಾಶ ಗಾವಡಿ ನಿರೂಪಿಸಿದರು.