ಕಾರವಾರ:ಮುಂಗಾರು ಪೂರ್ವಸಿದ್ಧತಾ ಕ್ರಮಗಳು ಹಾಗೂ ಇನ್ನಿತರ ವಿಷಯಗಳ ಕುರಿತ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಹಿಸಿ ಮಾತನಾಡಿದರು. ಜಿಲ್ಲೆಯ ಆಡಳಿತ, ಆಶಯ ಗಮನದಲ್ಲಿಟ್ಟುಕೊಂಡು ಸಾರ್ವಜನಿಕರ ಹಿತಾಸಕ್ತಿಗೆ ಯಾವುದೇ ತೊಂದರೆಯಾಗದಂತೆ ಕೆಲಸ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ನೆರೆ ಹಾವಳಿ, ಗುಡ್ಡ ಕುಸಿತ ಇಂತಹ ಪ್ರಕೃತಿ ವಿಕೋಪಗಳು ಆಗುವಂತಹ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮಾಡುವಂತಹ ಕಾರ್ಯಗಳನ್ನು ಕೂಡಲೇ ಮಾಡಿ ಮುಗಿಸಬೇಕು. ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾದ 24 ಗಂಟೆಗಳಲ್ಲಿ ಕ್ರಮ ಕೈಗೊಳ್ಳಬೇಕು ಮತ್ತು ಈಗಾಗಲೇ ನಡೆಯುತ್ತಿರುವ ಸೇತುವೆ ಕಾಮಗಾರಿಗಳು ಕೂಡಲೆ ಮುಗಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಹೇಳಿದರು.
ಕೃಷಿಗೆ ಸಂಬಂಧಿಸಿದಂತೆ ರೈತರಿಗೆ ಗೊಬ್ಬರ,ಯಂತ್ರೋಪಕರಣ ಹೀಗೆ ಇನ್ನಿತರ ಯಾವುದೇ ರಿತೀಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಹಾಗೂ ರೈತರಿಗೆ ಬೆಳೆ ಸಾಲ ಪಡೆಯಲು ಆಗುವಂತಹ ಸಮಸ್ಯೆಗಳನ್ನು ಬಗೆಹರಿಸಿ ಸೌಲಭ್ಯ ಕಲ್ಪಿಸುವಂತೆ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು. ವಿದ್ಯುತ್ ಸಂಬಂಧಿತ ಸಮಸ್ಯೆಗಳು ಪ್ರತಿ ಮಳೆಗಾಲದಲ್ಲಿ ಕಂಡು ಬರುತ್ತಿದ್ದು, ಈ ಬಾರಿ ಇಂತಹ ಸಮಸ್ಯೆಗಳು ಆಗದಂತೆ ಈಗಾಗಲೇ ಸೂಕ್ತವಾದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯದಿಂದ ಕೃತಕ ನೆರೆ ಉಂಟಾದ ಪ್ರದೇಶಗಳಲ್ಲಿ ಜೂ. 22ರ ಒಳಗಾಗಿ ನೀರು ಸಾರಾಗವಾಗಿ ಹರಿದು ಸಮುದ್ರ ಸೇರುವಂತೆ ಆಗಬೇಕು ಹಾಗೂ ರಾಷ್ಟ್ರೀಯ ಹೆದ್ದಾರಿಗಳಿಂದ ಆಗುವಂತಹ ತೊಂದರೆಗಳಿಗೆ ಸಂಪರ್ಕಿಸಲು ಉಚಿತ ಸಹಾಯವಾಣಿ ಸಂಖ್ಯೆಯನ್ನು ನೀಡಬೇಕು ಎಂದು ಐಆರ್‌ಬಿ ಅಧಿಕಾರಿಗಳಿಗೆ ಹೇಳಿದರು.
ಸಭೆಯಲ್ಲಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಚೆಂಡಿಯಾ, ಅರಗಾ ಪ್ರದೇಶಗಳಲ್ಲಿ ರಸ್ತೆ ದುರಸ್ತಿಯಿಂದ ಈಗಾಗಲೇ ಕೃತಕ ನೆರೆ ಹಾವಳಿ ಉಂಟಾಗಿದೆ. ಅದನ್ನು ಈ ಕೂಡಲೇ ಸರಿಪಡಿಸುವಂತೆ ಐಆರ್‌ಬಿ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಗಣಪತಿ ಉಳೇಕರ್, ಜಿಲ್ಲಾಧಿಕಾರಿ ಮುಲ್ಫ್ ಮುಗಿಲನ್, ಸಿಇಒ ಪ್ರಿಯಾಂಗಾ, ಎಸ್‌ಪಿ ಡಾ.ಸುಮನ ಪೆನ್ನೇಕರ್ ಹಾಗೂ ಇನ್ನಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.