ಕಾರವಾರ: ಕಾರವಾರ ನಗರಸಭೆಯ ಪೌರಾಯುಕ್ತ ಆರ್.ಪಿ.ನಾಯ್ಕ ಅವರು ಯಾವುದೇ ಠರಾವಿಲ್ಲದೇ ನಾಮಫಲಕದಲ್ಲಿ ದೇವನಾಗರಿ ಲಿಪಿಯಲ್ಲಿ ಬರೆಸಲಾಗಿದೆ. ಹೀಗಾಗಿ ಮೊದಲು ಈ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರವೀಣ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಹನೀಫ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕಾರವಾರ ನಗರಸಭೆಯವರು ನಗರ ವ್ಯಾಪ್ತಿಯಲ್ಲಿರುವ ನಾಮಫಲಕದಲ್ಲಿ ಕನ್ನಡದ ಜತೆಗೆ ಕೊಂಕಣಿಗರಿಗಾಗಿ ದೇವನಾಗರಿ ಲಿಪಿಯಲ್ಲಿ ಹೆಸರನ್ನು ಬರೆಯಲಾಗಿತ್ತು. ಇದನ್ನು ವಿರೋಧಿಸಿ ಕರವೇಯಿಂದ ಎರಡು ನಾಮಫಲಕಕ್ಕೆ ಮಸಿ ಬಳಿಯಲಾಗಿತ್ತು. ಆದರೆ ಕೊಂಕಣಿ ಮಂಚಿನವರು ಇದನ್ನು ವಿರೋಧಿಸಿ ರಾಜೇಶ ನಾಯ್ಕ ಅವರು ನೀಡಿದ ದೂರಿನಂತೆ ಅಂಕೋಲಾ ಮತ್ತು ಕುಮಟಾದವರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ನಾವು ಯಾವುದೇ ಆಸ್ತಿ-ಪಾಸ್ತಿ ಹಾನಿ ಮಾಡಿಲ್ಲ. ಈ ಪ್ರತಿಭಟನೆಯಲ್ಲಿ ಬಂದವರು ಕೂಡ ಗೋವಾ ಮತ್ತು ಮಹಾರಾಷ್ಟ್ರದಿಂದ ಬಂದವರ ಸಂಖ್ಯೆಯೇ ಅಧಿಕವಾಗಿತ್ತು. ಈ ಎಲ್ಲಾ ಅವಾಂತರಗಳಿಗೆ ಕಾರಣವಾದ ಪೌರಾಯುಕ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಜಾತಾ ಗಾಂವಕರ ಮಾತನಾಡಿ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಕೊಂಕಣಿಗೆ ಲಿಪಿ ಇಲ್ಲದಿರುವುದರಿಂದ ಕನ್ನಡವನ್ನೇ ಬಳಸಲಾಗುತ್ತದೆ ಮತ್ತು ಅದೇ ಸೂಕ್ತವಾದದ್ದು. ಆದರೆ ಈ ಗೊಂದಲವನ್ನು ಸೃಷ್ಟಿಸಿದ ನಗರಸಭಾ ಆಯುಕ್ತರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು, ಅದರ ಬದಲಾಗಿ ಕನ್ನಡದ ಪರ ಹೋರಾಟಗಾರರ ಮೇಲೆ ಪೊಲೀಸ್ ದೂರು ದಾಖಲಾಗಿರುವುದು ವಿಪರ್ಯಾಸವಾಗಿದ್ದು, ತಕ್ಷಣ ದೂರನ್ನು ಕೈಬಿಟ್ಟು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಅಂಕೋಲಾ ತಾಲೂಕು ಅಧ್ಯಕ್ಷ ಉದಯ ನಾಯ್ಕ ಮಾತನಾಡಿ, ಪ್ರತಿ ವರ್ಷ ನವೆಂಬರ್ 1ರಂದು ಕರ್ನಾಟಕದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಿದರೆ ಕಾರವಾರದಲ್ಲಿ ಕೊಂಕಣಿ ಮಂಚ್‌ನವರು ಕರಾಳ ದಿನ ಆಚರಿಸುತ್ತಾರೆ. ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಕನ್ನಡಪರ ಸಂಘಟನೆಯವರ ಮೇಲೆ ದೂರು ದಾಖಲಿಸಿಕೊಳ್ಳುವುದು ಸರಿಯಲ್ಲ. ರಾಜೇಶ ನಾಯ್ಕ ಅವರು ತಮ್ಮ ಸ್ವಾರ್ಥಕ್ಕಾಗಿ ಕರವೇಯನ್ನು ಬಳಸಿಕೊಂಡಿದ್ದರು. ನಂತರ ಅವರನ್ನು ತೆಗೆದು ಹಾಕಲಾಗಿತ್ತು. ಇಂಥವರೇ ಈಗ ಪುಂಡಾಟಿಕೆ ಮಾಡುತ್ತಿದ್ದಾರೆ. ಇದು ಕೇವಲ ಇಲ್ಲಿಗೆ ನಿಲ್ಲದೇ, ರಾಜ್ಯಾಧ್ಯಕ್ಷರೂ ಕೂಡ ಕಾರವಾರಕ್ಕೆ ಆಗಮಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಕುಮಟಾ ಅಧ್ಯಕ್ಷ ನಾಗರಾಜ ಶೇಟ್, ಜಿಲ್ಲಾ ಕಾರ್ಯಾಧ್ಯಕ್ಷೆ ಸರಸ್ವತಿ ಗುನಗಾ, ಯಲ್ಲಾಪುರ ಅಧ್ಯಕ್ಷೆ ನುಸ್ರದ್ ಶೇಖ್ ಇತರರು ಇದ್ದರು.