ಯಲ್ಲಾಪುರ: ತಾ.ಪಂ ಆವಾರದ ಗಾಂಧಿ ಕುಟೀರದಲ್ಲಿ ಸೋಮವಾರ ಬೆಳಿಗ್ಗೆ ತಾ.ಪಂ ಹಾಗೂ ಪ.ಪಂ ವಿವಿಧ ಯೋಜನೆಯಡಿಯಲ್ಲಿ ಅಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಪತ್ರ, ಸಾಧನ ಸಲಕರಣೆಯನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ವಿತರಿಸಿ ಮಾತನಾಡಿದರು.
ಎರಡು ವರ್ಷದ ನಂತರ ಕೋವಿಡ್ ತೊಲಗಿ ಮರಳಿ ಸರಕಾರದ ಯೋಜನೆಗಳು ಚಾಲನೆಗೊಳ್ಳುತ್ತಿವೆ. ಮತ್ತೆ ಜನರೊಂದಿಗೆ ಬೆರೆಯುವ ಅವಕಾಶ ಸಿಕ್ಕಿದೆ. ಸರಕಾರದ ಯೋಜನೆಗಳು ಮತ್ತೆ ಚಾಲನೆಗೊಳ್ಳುತ್ತಿದೆ ಎಂದು ಹೇಳಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಶೇ 98ರಷ್ಟು ಜನರಿಗೆ 2 ಲಸಿಕೆಯನ್ನು ಉಚಿತವಾಗಿ ನೀಡಿ ಅವರ ಆರೋಗ್ಯವನ್ನು ಕಾಪಾಡಲಾಯಿತು. ಸುದೈವದಿಂದ ರಾಜ್ಯ ಮತ್ತು ದೇಶದಲ್ಲಿ ಮಾಹಾ ಮಾರಿ ಕೊವಿಡ್‌ನಿಂದ ಭಯಮುಕ್ತ ವಾತಾವರಣವನ್ನು ತಲುಪಲಾಗಿದೆ. ಆ ಕಾರಣಕ್ಕಾಗಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೆಣ್ಣುಮಕ್ಕಳು, ಮಕ್ಕಳು ಈ ಸಭೆಗೆ ಬರಲು ಕಾರಣವಾಗಿದೆ. ಈಗ ಬಹಳಷ್ಟು ಕಾರ್ಯಕ್ರಮಗಳನ್ನು ಸರ್ಕಾರ ಕೈಗೆತ್ತಿಕೊಂಡಿದೆ. ಯಲ್ಲಾಪುರ ತಾಲೂಕಿನಲ್ಲಿ ಶಾಸಕರ ನಿಧಿಯಿಂದ 34 ಜನರಿಗೆ 1 ಲಕ್ಷ ರೂ. ಮೌಲ್ಯದ ಸ್ಕೂಟರನ್ನು ವಿತರಿಸಲಾಗಿದೆ. 2208 ಜನರಿಗೆ ಭಾಗ್ಯಲಕ್ಷ್ಮೀ ಬಾಂಡ್ ನೀಡಿದ ನಿರ್ಣಯಿಸಲಾಗಿದೆ. ಕಿವಿ ಕೇಳಿಸದವರಿಗೆ ಶ್ರವಣ ಸಾಧನ, ಅಂಗವಿಕಲರಿಗೆ ಸೈಕಲ್, ವ್ಹೀಲ್ ಚೇರ್ ಮುಂತಾದವುಗಳನ್ನು ವಿತರಿಸಲಾಗಿದೆ. ತಾಲ್ಲೂಕಿನ ಹದಿನೈದು ಗ್ರಾ.ಪಂಚಾಯತಿಗಳ 460 ಫಲಾನುಭವಿಗಳಿಗೆ, ಮನೆಯ ಹಕ್ಕುಪತ್ರವನ್ನು ಪಟ್ಟಾ ವಿತರಿಸಲಾಗಿದೆ. ನಗರ ಪ್ರದೇಶದಲ್ಲಿ ಮೂವತ್ತೆಂಟು ಜನರಿಗೆ ಮನೆ ಹಕ್ಕುಪತ್ರ ವಿತರಿಸಲಾಗಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಅಭಿವೃದ್ಧಿಯ ಪರ್ವ ಮತ್ತೆ ಪ್ರಾರಂಭವಾಗಿದೆ ಎಂದು ಹೇಳಿದರು.
ತಾ.ಪಂ ಇಓ ಜಗದೀಶ ಕಮ್ಮಾರ ಸ್ವಾಗತಿಸಿದರು. ಶಿಕ್ಷಕ ಸುಧಾಕರ ನಾಯಕ ನಿರೂಪಿಸಿದರು. ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ, ತಾ.ಪಂ ಆಡಳಿತಾಧಿಕಾರಿ ನಾಗರಾಜ ಹೆಗಡೆ, ಪ.ಪಂ ಅಧ್ಯಕ್ಷೆ ಸುನಂದಾದಾಸ್, ಉಪಾಧ್ಯಕ್ಷೆ ಶಾಮಲಿ ಪಾಟಣಕರ, ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ವೇದಿಕೆಯಲ್ಲಿದ್ದರು.
ಮೊಬೈಲ್ ಶೌಚಾಲಯ: ಪಟ್ಟಣ ಪಂಚಾಯತಿ ವತಿಯಿಂದ 5.9 ಲಕ್ಷ ರೂ. ವೆಚ್ಚದ ಮೊಬೈಲ್ ಶೌಚಾಲಯ ಹಾಗೂ 2 ಕಸ ಸಂಗ್ರಹ ವಾಹನಗಳಿಗೆ ಇದೇ ಸಂದರ್ಭದಲ್ಲಿ ಸಚಿವ ಶಿವರಾಮ್ ಹೆಬ್ಬಾರ್ ಹಸಿರು ನಿಶಾನೆ ತೋರಿದರು.