ಸಿದ್ದಾಪುರ: ತಾಲೂಕಿನ ಗೊಂಟನಾಳದ ಯುವ ಶೈಕ್ಷಣಿಕಪ್ರತಿಭೆ ಅಪೂರ್ವ ಅನಂತ ಹೆಗಡೆ ಜರ್ಮನಿಯ ಹೈಡಲ್‌ಬರ್ಗ ವಿಶ್ವವಿದ್ಯಾನಿಲಯದಿಂದ ‘ನೊಯ್ಸಿ ಡೈನಾಮಿಕ್ಸ ಆಫ್ ಯು(೧) ಲೆಟ್ಟಿಸ್ ಗೇಜ್ ಥಿಯರಿ ಇನ್ ಅಲ್ಟ್ರಾಕೋಲ್ಡ ಆಟೊಮಿಕ್ ಮಿಕ್ಸ್ಚರ್ಸ್’ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆಯುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಗೊಂಟನಾಳದ ಪ್ರಗತಿಪರ ಕೃಷಿಕ ಅನಂತ ವಿಘ್ನೇಶ್ವರ ಹೆಗಡೆ ಹಾಗೂ ಗಾಯಕಿ ಶ್ರೀಮತಿ ವಾಣಿ ಹೆಗಡೆ ಅವರುಗಳ ಮಗಳಾಗಿರುವ ಈ ಪ್ರತಿಭಾವಂತ ಯುವತಿಯು ಗೊಂಟನಾಳ ಮತ್ತು ಮಂಚಿಕೇರಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಮಂಚಿಕೇರಿಯ ರಾಜರಾಜೇಶ್ವರಿ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದವರು. ತಮ್ಮ ಪದವಿಪೂರ್ವ ಶಿಕ್ಷಣವನ್ನು ವಿಜ್ಞಾನ ವಿಷಯದಲ್ಲಿ ಉಜಿರೆಯ ಎಸ್‌ಡಿಎಂ ಕಾಲೇಜಿನಿಂದ ಪಡೆದು ಬೆಂಗಳೂರು ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಪಿಎಂಈ ಪದವಿ ಗಳಿಸಿದರು.
ಜರ್ಮನಿಯ ಹೈನರಿಚ್ ಯುನಿವರ್ಸಿಟಿಯಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕು.ಅಪೂರ್ವ ಪ್ರಸ್ತುತ ಜರ್ಮನಿಯ ಹೈಡಲ್‌ಬರ್ಗ ಯುನಿವರ್ಸಿಟಿಯಿಂದ ಪ್ರಾಯೋಗಿಕ ಭೌತಶಾಸ್ತ್ರ (ಎಕ್ಸಪರಿಮೆಂಟಲ್ ಆಟೊಮಿಕ್ ಫಿಜಿಕ್ಸ)ದಲ್ಲಿ ಡಾಕ್ಟರೇಟ್ ಪದವಿ ಪಡೆದು ಸಾಧನೆ ತೋರಿದ್ದಾರೆ.