ಶಿರಸಿ: ನಗರದ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಸಂಗೀತ ಮತ್ತು ನೃತ್ಯ ವಿಭಾಗದ ಸಹಯೋಗದಲ್ಲಿ ವಿಶ್ವ ಸಂಗೀತ ಮತ್ತು ವಿಶ್ವ ಯೋಗ ದಿನಾಚರಣೆ ನಿಮಿತ್ತ ‘ಉದಯ ರಾಗ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
“ಹಿತ್ತಲ ಗಿಡ ಮದ್ದಲ್ಲ” ನಮ್ಮಲ್ಲಿರುವ ವಿಶೇಷತೆಗಳನ್ನು ಬೇರೆಯವರು ಅರಸಿ ಬಂದಾಗಲೇ ನಮಗೆ ಅದರ ಮಹತ್ವ ತಿಳಿಯುತ್ತದೆ, ಸಂಗೀತವೂ ಹಾಗೇ ಅದರಲ್ಲಿರುವ ಸತ್ವವನ್ನು ಆಹ್ಲಾದಿಸಿದಾಗಲೇ ಅದರ ಮಹತ್ವ ತಿಳಿಯುತ್ತದೆ ಎಂದು ಮುಖ್ಯ ಅತಿಥಿ ಎಂ.ಪಿ.ಇ. ಸೊಸೈಟಿಯ ಅಧ್ಯಕ್ಷರಾದ ಕೃಷ್ಣಮೂರ್ತಿ ಭಟ್ ಶಿವಾನಿ ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀರಂಜಿನಿ ಅಹಿರ್ ಭೈರವ ರಾಗ ಹಾಗೂ ಭಜನ್ ಗಳನ್ನು ಹಾಡಿದರು ಅವರಿಗೆ ವಿಜಯೇಂದ್ರ ಹೆಗಡೆ ಹಾಗೂ ಅಜಯ್ ಹೆಗಡೆ ತಬಲಾ ಹಾಗೂ ಸಂವಾದಿನಿ ಸಾಥ್ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಟಿ.ಎಸ್. ಹಳೆಮನೆ ಮಾತನಾಡಿ ವಿದ್ಯಾರ್ಥಿಗಳು ಮಾನವೀಯತೆ, ವಿನಯತೆ, ವಿನಮ್ರತೆ ಹೊಂದಿರಬೇಕು. ಎಷ್ಟೇ ವಿದ್ಯೆ ಪಡೆದರು ವಿನಯತೆ ಇಲ್ಲವಾದಲ್ಲಿ ಅದು ಶೋಭೆಯಲ್ಲ ಎಂದು ಹೇಳಿದರು.
ನಿವೃತ್ತ ಸಂಗೀತ ಪ್ರಾಧ್ಯಾಪಕ ಸಂಜೀವ್ ಪೊತದಾರ್ ಉಪಸ್ಥಿತರಿದ್ದರು. ಸಂಗೀತ ವಿಭಾಗದ ಮುಖ್ಯಸ್ಥರಾದ ಡಾ. ಕೃಷ್ಣಮೂರ್ತಿ ಭಟ್ ಸ್ವಾಗತಿಸಿ ವಂದಿಸಿದರು.